ಮನೆ ರಾಜಕೀಯ ಹಿಜಾಬ್ ವಿವಾದ: ಇವೆಲ್ಲಾ ಪ್ರತಿಪಕ್ಷದವರ ಪಿತೂರಿ ಎಂದ ಗೃಹ ಸಚಿವರು

ಹಿಜಾಬ್ ವಿವಾದ: ಇವೆಲ್ಲಾ ಪ್ರತಿಪಕ್ಷದವರ ಪಿತೂರಿ ಎಂದ ಗೃಹ ಸಚಿವರು

0

ಬೆಂಗಳೂರು: ಹಿಜಾಬ್, ಕೇಸರಿ ಶಾಲು ಗಲಾಟೆ ಸರ್ಕಾರದ ವೈಫಲ್ಯವಲ್ಲ. ಇವೆಲ್ಲ ಪ್ರತಿಪಕ್ಷದವರ ಪಿತೂರಿ. ಕಾಂಗ್ರೆಸ್ ನಾಯಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಮವಸ್ತ್ರ ಧರಿಸುವ ವಿಷಯದಲ್ಲಿ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

ಆರ್.ಟಿ.ನಗರ ನಿವಾಸದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭೇಟಿಯಾಗಿ ಬಳಿಕ ಮಾತನಾಡಿದ ಸಚಿವರು, ನಿನ್ನೆ ಹಿಜಾಬ್-ಕೇಸರಿ ಶಾಲು ಗಲಾಟೆಯಲ್ಲಿ ಅಹಿತಕರ ಘಟನೆಗಳು, ಕಾನೂನು ಬಾಹಿರ ಕೆಲಸಗಳು ಆಗಿದ್ರೆ ಕ್ರಮ ಕೈಗೊಳ್ಳಲಾಗುವುದು. ಇದರ‌ ಬಗ್ಗೆ ಆಯಾಯ ಪೊಲೀಸರಿಗೆ ಸೂಚನೆ ಕೊಡಲಾಗಿದೆ. ಈಗಾಗಲೇ ಕೆಲವರನ್ನು ವಶಕ್ಕೆ ಪಡೆಯಲಾಗಿದೆ. ಆದ್ರೆ ವಿದ್ಯಾರ್ಥಿಗಳನ್ನು ಯಾರನ್ನೂ ಬಂಧಿಸಿಲ್ಲ ಎಂದರು.

ಈ ಸಂಬಂಧ ಸಿಎಂ ಜೊತೆ ಚರ್ಚೆ ನಡೆಸಿದ್ದೇವೆ. ಕಾನೂನು ಸುವ್ಯವಸ್ಥೆ ಪಾಲನೆ ಬಗ್ಗೆ ಚರ್ಚೆ ಆಗಿದೆ. ಕೋರ್ಟ್ ಆದೇಶ ಪಾಲನೆ ಮಾಡಬೇಕು ಎಂಬ ಬಗ್ಗೆ ಚರ್ಚೆ ಆಗಿದೆ. ಸರ್ಕಾರ ಕೋರ್ಟ್ ತೀರ್ಪಿನ ನಿರೀಕ್ಷೆಯಲ್ಲಿದೆ. ಕೋರ್ಟ್ ತೀರ್ಪಿನ‌ ಪಾಲನೆಗೆ ಕ್ರಮ ವಹಿಸಲಾಗುತ್ತದೆ. ಎಲ್ಲಾ ಗೊಂದಲ ಒಂದು ವಾರದೊಳಗೆ ಬಗೆಹರಿಸಲು ಸಿಎಂ ತಿಳಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷರು, ಶಿವಮೊಗ್ಗದಲ್ಲಿ ವಿಧ್ಯಾರ್ಥಿಗಳು ರಾಷ್ಟ್ರ ಧ್ವಜ ಇಳಿಸಿ ಕೇಸರಿ ಧ್ವಜ ಏರಿಸಿದ್ದಾರೆ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ. ಕಾಲೇಜು ಆವಣದಲ್ಲಿ ರಾಷ್ಟ್ರಧ್ವಜ ಹಾರುತ್ತಿರಲಿಲ್ಲ. ಡಿ.ಕೆ.ಶಿವಕುಮಾರ್ ಬೇಜವಾಬ್ದಾರಿಯುತವಾಗಿ ಮಾತನಾಡಿದ್ದಾರೆ. ಬೆಂಕಿಗೆ ತುಪ್ಪ ಸುರಿಸುವ ಕೆಲಸ ಮಾಡಿದ್ದಾರೆಂದು ಕಿಡಿ ಕಾರಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸದ್ಯ ವಿಪಕ್ಷ ಸ್ಥಾನದಲ್ಲಿದೆ. ಅವರು ಇದೇ ಪ್ರವೃತ್ತಿ ಮುಂದುವರಿಸಿದರೆ ಆ ಪಕ್ಷವನ್ನು ಜನರು ಅರಬ್ಬಿ ಸಮುದ್ರಕ್ಕೆ ಎಸೆಯುತ್ತಾರೆ ಎಂದು ಟೀಕಿಸಿದರು.

ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ನಿನ್ನೆಯ ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ಕೆಲವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಘಟನೆಯ ಪ್ರೇರಣಾ ಶಕ್ತಿಗಳು ಯಾರಿದ್ದಾರೆ ಎಂಬುದರ ಬಗ್ಗೆಯೂ ತನಿಖೆ ಆಗಲಿದೆ ಎಂದು ಆರಗ ಜ್ಞಾನೇಂದ್ರ ತಿಳಿಸಿದರು.

ಹಿಂದಿನ ಲೇಖನಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದೂಗಳಿಗೆ ಹಿಜಾಬ್ ಹಾಕಿಸುತ್ತದೆ: ವಿ.ಸುನೀಲ್ ಕುಮಾರ್
ಮುಂದಿನ ಲೇಖನದಲಿತ ಮಹಿಳಾ ಪತ್ರಕರ್ತೆ ಕುರಿತ ಸಾಕ್ಷ್ಯಚಿತ್ರ ‘ರೈಟಿಂಗ್ ವಿತ್ ಫೈರ್’ ಆಸ್ಕರ್‍ ಗೆ ನಾಮ ನಿರ್ದೇಶನ