ನವದೆಹಲಿ(Newdelhi): ಕರ್ನಾಟಕ ಶಾಲಾ ಕಾಲೇಜುಗಳ ತರಗತಿಗಳ ಒಳಗೆ ಹಿಜಾಬ್ ಧರಿಸುವುದನ್ನು ನಿಷೇಧಿಸಿ ಹೈಕೋರ್ಟ್ ನೀಡಿದ ಆದೇಶದ ವಿರುದ್ಧ ಸುಪ್ರೀಂಕೋರ್ಟ್’ಗೆ ಸಲ್ಲಿಸಲಾದ ಮೇಲ್ಮನವಿ ಅರ್ಜಿಗಳ ವಿಚಾರಣೆಯನ್ನು ಸೋಮವಾರಕ್ಕೆ (ಸೆ.12 ರಂದು) ಮುಂದೂಡಲಾಗಿದೆ.
ಮೂರನೇ ದಿನದ ವಿಚಾರಣೆಯ ವಾದ- ಪ್ರತಿವಾದಗಳನ್ನು ಆಲಿಸಿದ ಬಳಿಕ ವಿಚಾರಣೆ ಮುಂದೂಡಲಾಗಿದೆ.
ಮೊದಲ ದಿನ ವಿಚಾರಣೆಯಲ್ಲಿ ಫಿರ್ಯಾದುದಾರರ ಪರವಾಗಿ ವಾದ ಮಂಡಿಸಿದ್ದ ಹಿರಿಯ ವಕೀಲ ದೇವದತ್ ಕಾಮತ್ ಅವರು, ಬಟ್ಟೆಯ ವಿಚಾರದಲ್ಲಿ ಸರ್ಕಾರ ಮಕ್ಕಳ ಶಿಕ್ಷಣವನ್ನು ಹಾಳು ಮಾಡುತ್ತಿದೆ ಎಂದು ದೂರಿದ್ದರು.
ಈ ವೇಳೆ ಪೀಠ, ಮಕ್ಕಳು ಶಾಲೆಯೊಳಗೆ ಮಿಡಿ, ಸ್ಕರ್ಟ್ ಧರಿಸಿ ಬರಬಹುದೇ ಎಂದು ಪ್ರಶ್ನಿಸಿದ್ದರು. ಹೀಗಾಗಿ ಶಿಕ್ಷಣಕ್ಕೂ, ಬಟ್ಟೆಗೂ ಸಂಬಂಧವಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿತ್ತು.
ನಿನ್ನೆ ನಡೆದ ಎರಡನೇ ದಿನದ ವಿಚಾರಣೆಯಲ್ಲಿ “ಹಿಜಾಬ್ ಧರಿಸುವುದು ಹಕ್ಕು” ಎಂದು ವಾದ ಮಂಡಿಸಿದಾಗ ಕೋರ್ಟ್, ಧರಿಸುವ ಹಕ್ಕಿದ್ದರೆ, ಅದನ್ನು ಧರಿಸದೇ ಇರುವ ಹಕ್ಕೂ ಇದೆ ಎಂದು ನ್ಯಾಯಾಧೀಶರು ಹೇಳಿದ್ದರು.
ಮೇಲ್ಮನವಿ ಅರ್ಜಿಗಳನ್ನು ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠ ವಿಚಾರಣೆ ನಡೆಸಿತು.