ಬೆಂಗಳೂರು: ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದೂಗಳಿಗೂ ಹಿಜಾಬ್ ಹಾಕಿಸುತ್ತದೆ ಎಂದು ಕನ್ನಡ ಮತ್ತುಸಂಸ್ಕೃತಿ ಸಚಿವ ವಿ.ಸುನೀಲ್‌ಕುಮಾರ್ ಹೇಳಿದರು.
ಮಂಗಳೂರಿನಲ್ಲಿ ಕಾಂಗ್ರೆಸ್, ಎಸ್‌ಡಿಪಿಐ ಮತ್ತು ಪಿಎಫ್‌ಐ ಒಗ್ಗಟ್ಟಾಗಿವೆ. ದೇಶ ವಿಭಜನೆಗೆ ಕಾಂಗ್ರೆಸ್ ಬೆಂಬಲಿಸುತ್ತಿದೆ ಎಂದು ಅವರು ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿದಿಗಳೊಂದಿಗೆ ಮಾತನಾಡಿದರು.
ಹಿಜಾಬ್‌ಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಇಂದು ಮಧ್ಯಾಹ್ನದ ಮತ್ತೊಮ್ಮೆ ವಿಚಾರಣೆ ನಡೆಯಲಿದ್ದು, ನ್ಯಾಯಾಲಯ ಏನು ಆದೇಶ ನೀಡುತ್ತದೆ ಎಂಬುದನ್ನು ನಾವೆಲ್ಲರೂ ನಿರೀಕ್ಷೆ ಮಾಡುತ್ತಿದ್ದೇವೆ ಎಂದು ಹೇಳಿದರು.
ನಾವು ಭಾರತದಲ್ಲಿ ವಾಸಿಸುತ್ತಿರುವಾಗ ಈ ನೆಲದ ಕಾನೂನಿಗೆ ಗೌರವ ನೀಡಬೇಕು. ಆದರೆ, ಯಾರು ಪ್ರತ್ಯೇಕವಾಗಿ ಇರಬೇಕು ಎಂದು ಬಯಸುತ್ತಾರೋ ಕಾಂಗ್ರೆಸ್ ಅಂತವರನ್ನು ಬೆಂಬಲಿಸುತ್ತದೆ. ಜನರ ಮಧ್ಯೆ ದ್ವೇಷ ಹಚ್ಚುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಕಾಲೇಜಿನಲ್ಲಿ ಈ ರೀತಿಯ ಭಾವನೆ ಸೃಷ್ಟಿ ಮಾಡುವುದಕ್ಕೆ ಯಾರು ಕಾರಣ? ಪ್ರತ್ಯೇಕವಾದವನ್ನು ಕೇಳುವವರಿಗೆ ಯಾರು ಬೆಂಬಲಿಸುತ್ತಿದ್ದಾರೆ? ಇದೊಂದು ವ್ಯವಸ್ಥಿತವಾದ ಪಿತೂರಿ. ಸರ್ಕಾರಿ ಶಾಲೆಗೆ ಫೀಸ್ ಕಟ್ಟೋದಕ್ಕೆ ಆಗದವರಿಗೆ ಕೋರ್ಟ್ ಮೆಟ್ಟಿಲು ಹತ್ತುವುದಕ್ಕೆ ಯಾರು ಬೆಂಬಲ ಕೊಟ್ಟರು ಎಂದು ಸುನೀಲ್‌ಕುಮಾರ್ ಪ್ರಶ್ನಿಸಿದರು. ಕಾಂಗ್ರೆಸ್ ನಾಯಕರು ಕರ್ನಾಟಕವನ್ನು ಏನು ಮಾಡುವುದಕ್ಕೆ ಹೊರಟಿದ್ದೀರಿ. ತಿಲಕ ಇಟ್ಟುಕೊಂಡು ಬಂದವರನ್ನು ಕಾಂಗ್ರೆಸ್ ನಾಯಕರು ವಿರೋಧ ಮಾಡ್ತಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದುಬಿಟ್ಟರೆ ಇಡೀ ರಾಜ್ಯದ ಜನರಿಗೆ ಹಿಜಾಬ್ ಹಾಕಿಸುತ್ತಾರೆ. ರಾಷ್ಟ್ರ ಧ್ವಜ ಇಳಿಸಿದರು ಎಂಬ ಸುಳ್ಳನ್ನು ಸ್ವತಃ ಕೆಪಿಸಿಸಿ ಅಧ್ಯಕ್ಷರೇ ಹೇಳ್ತಾರೆ ಎಂದು ಖಂಡಿಸಿದರು.