ಚಾಮರಾಜನಗರ ಜಿಲ್ಲೆಯ ದಟ್ಟಾರಣ್ಯದ ಗಿರಿಶ್ರೇಣಿಯಲ್ಲಿರುವ ಸುಂದರ ಪವಿತ್ರ ಪುಣ್ಯಕ್ಷೇತ್ರ ಗೋಪಾಲಸ್ವಾಮಿ ಬೆಟ್ಟ.
ಮೈಸೂರಿನಿಂದ 75 ಕಿಲೋ ಮೀಟರ್ ದೂರದಲ್ಲಿರುವ ಈ ಬೆಟ್ಟದ ಮೇಲೆ ಪ್ರತಿನಿತ್ಯ ಮಂಜು(ಹಿಮ) ಕವಿಯುವ ಕಾರಣ ಹಾಗೂ ಇಲ್ಲಿ ಪುರಾತನವಾದ ಗೋಪಾಲಸ್ವಾಮಿಯ ದೇವಾಲಯವಿರುವ ಹಿನ್ನೆಲೆಯಲ್ಲಿ ಬೆಟ್ಟಕ್ಕೆ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಎಂಬ ಹೆಸರು ಬಂದಿದೆ.
ಸಮುದ್ರಮಟ್ಟದಿಂದ 1,454 ಮೀಟರ್ ಎತ್ತರದಲ್ಲಿರುವ ಈ ಪ್ರದೇಶದಲ್ಲಿ ಚಳಿಗಾಲ ಹಾಗೂ ಮಳೆಗಾಲದಲ್ಲಿ ಮಂಜು ಮುಸುಕಿದ ಪರಿಸರ ನೋಡುವುದೇ ಒಂದು ಸೊಬಗು ಅರಣ್ಯ ಇಲಾಖೆಯ ಆಡಳಿತಕ್ಕೆ ಒಳಪಟ್ಟ ಈ ಪ್ರದೇಶದಲ್ಲಿ ಆನೆಗಳು, ಹುಲಿಗಳೂ ಸೇರಿದಂತೆ ಲಕ್ಷಾಂತರ ಪ್ರಬೇಧದ ಸಸ್ಯ ಹಾಗೂ ಪ್ರಾಣಿ ಸಂಕುಲವಿದೆ. ಹೀಗಾಗಿ ಇಲ್ಲಿರುವ ಪ್ರಾಣಿಗಳಿಗೆ ಯಾವುದೇ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಅರಣ್ಯ ಇಲಾಖೆ ಈ ದೇವಾಲಯಕ್ಕೆ ಪ್ರವೇಶ ಸಮಯ ನಿಗದಿ ಮಾಡಿದೆ. ಬೆಳಗ್ಗೆ 8-30ರಿಂದ ಸಂಜೆ 4ಗಂಟೆಯವರೆಗೆ ಮಾತ್ರವೇ ದೇವಾಲಯಕ್ಕೆ ಪ್ರವೇಶ.
ಬೆಳಗಿನ ವೇಳೆ ಹಾಗೂ ಸಂಜೆ ಇಲ್ಲಿ ಹೆಚ್ಚಾಗಿ ಮಂಜು (ಹಿಮ) ಮುಸುಕಿದ ವಾತಾವರಣ ಇರುವ ಕಾರಣ ಹಿಮವದ್ ಗೋಪಾಲಸ್ವಾಮಿ ಬೆಟ್ಟ ನೋಡಲು ಬೆಳಗ್ಗೆ 8-30ರ ಹೊತ್ತಿಗೆ ಅಥವಾ ಸಂಜೆ 3-30ರ ಹೊತ್ತಿಗೆ ದೇವಾಲಯ ದರ್ಶನಕ್ಕೆ ಹೋದರೆ, ಸುತ್ತಲಿನ ಪರಿಸರ, ರಭಸದಿಂದ ಬೀಸುವ ತಂಗಾಳಿ, ಚಲಿಸುವ ಮಂಜಿನ ಮೋಡಗಳು ಊಟಿ, ಕೊಡೈಕೆನಾಲ್, ಸಿಮ್ಲಾಗೆ ಕರ್ನಾಟಕವೇನೂ ಕಡಿಮೆ ಇಲ್ಲ ಎಂಬುದನ್ನು ಸಾರುತ್ತವೆ.
ಐತಿಹ್ಯ : ಈ ಬೆಟ್ಟಕ್ಕೆ ಹಿಂದೆ ಗೋವರ್ಧನಗಿರಿ ಎನ್ನುತ್ತಿದ್ದರು. ಬೆಟ್ಟ ದೂರದಿಂದ ನೋಡಲು ಹಸುವಿನ ಆಕಾರದಲ್ಲಿರುವ ಕಾರಣ ಇದನ್ನು ಗೋವರ್ಧನಗಿರಿ ಎನ್ನುತ್ತಿದ್ದರು ಎಂಬುದು ಸ್ಥಳೀಯರ ಅನಿಸಿಕೆ. ಹಚ್ಚ ಹಸುರಿನಿಂದ ಕೂಡಿದ ಈ ಬೆಟ್ಟದಲ್ಲಿ ದನ, ಕರು ಮೇಯಿಸಲು ಬೆಟ್ಟದ ತಪ್ಪಲಿನ ಗೋಪಾಲಪುರದ ಗೋಪಾಲಕರು ಬರುತ್ತಿದ್ದರು, ಅವರು ಇಲ್ಲಿ ಗೋವರ್ಧನ ಗಿರಿಯನ್ನೇ ಎತ್ತಿ ಗೋಪಾಲಕರನ್ನು ರಕ್ಷಿಸಿದ ಕೃಷ್ಣನ ಮೂರ್ತಿಯನ್ನು ಪೂಜಿಸುತ್ತಿದ್ದರು ಹೀಗಾಗಿ ಈ ಬೆಟ್ಟ ಗೋವರ್ಧನಗಿರಿ ಎಂದು ಹೆಸರಾಯಿತು ಎಂದೂ ಊರ ಹಿರಿಯರು ವಾದಿಸುತ್ತಾರೆ. ಕಮಲಾಚಲ, ಕಾಮಾದ್ರಿ, ಕಂಜಗಿರಿ ಎಂಬ ಹೆಸರುಗಳೂ ಬೆಟ್ಟಕ್ಕೆ ಇದ್ದ ಬಗ್ಗೆ ಉಲ್ಲೇಖವಿದೆ. 1315ರಲ್ಲಿ ಮಾಧವ ಗಾಯಕ್ ವಾಡರು ಇಲ್ಲಿ ಗೋಪಾಲಸ್ವಾಮಿ ದೇವಾಲಯ ಕಟ್ಟಿಸಿದ ಬಗ್ಗೆ ದಾಖಲೆಗಳಿವೆ.
ಬೆಟ್ಟದ ಮೇಲೆ ನಿಂತು ಸುತ್ತಮುತ್ತ ಕಣ್ಣು ಹಾಯಿಸಿದರೆ ಬಂಡಿಪುರ ಹಾಗೂ ಕೇರಳದ ವೈನಾಡು ಅರಣ್ಯ ಪ್ರದೇಶ ಗೋಚರಿಸುತ್ತದೆ. ಬೆಟ್ಟದ ಮೇಲೆ 700 ವರ್ಷಗಳಷ್ಟು ಹಳೆಯದಾದ ದ್ರಾವಿಡ ಶೈಲಿಯ ಭವ್ಯ ದೇವಾಲಯವಿದೆ. ಈಗ ಇದನ್ನು ಜೀರ್ಣೋದ್ಧಾರಗೊಳಿಸಲಾಗಿದೆ. ರುಕ್ಮಿಣಿ, ಸತ್ಯಭಾಮೆಯರ ಸಹಿತ ಇಲ್ಲಿ ನೆಲೆಸಿರುವ ಶ್ರೀಕೃಷ್ಣನಿಗೆ ಸಂತಾನ ಗೋಪಾಲಕೃಷ್ಣ ಎಂಬ ಹೆಸರೂ ಇದೆ. ಮೂಲ ದೇವರನ್ನು ಅಗಸ್ತ್ಯ ಮಹರ್ಷಿಗಳು ಪ್ರತಿಷ್ಠಾಪಿಸಿದರೆಂದೂ ಹೇಳಲಾಗುತ್ತದೆ.
ಈ ಪ್ರದೇಶದಲ್ಲಿ 8 ಪುಣ್ಯ ತೀರ್ಥಗಳಿವೆ. ಈ ಪೈಕಿ ಹಂಸತೀರ್ಥ ಮಹಿಮಾನ್ವಿತವಾದುದು. ಪುರಾಣದಲ್ಲಿನ ಕಥೆಗಳ ಪ್ರಕಾರ ಒಮ್ಮೆ ಕಾಗೆಗಳ ಹಿಂಡು ಈ ತೀರ್ಥದಲ್ಲಿ ಸ್ನಾನ ಮಾಡಿ ಹಂಸಗಳಾಗಿ ಪರಿವರ್ತನೆಯಾದವಂತೆ ಹೀಗಾಗೇ ಇದಕ್ಕೆ ಹಂಸತೀರ್ಥ ಎಂಬ ಹೆಸರು ಬಂತೆಂದು ಪ್ರತೀತಿ.
ಸುಂದರ ಗಿರಿಧಾಮವೂ ಆದ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ನಾಸ್ತಿಕರು, ಆಸ್ತಿಕರು ಇಬ್ಬರೂ ಆಗಮಿಸುತ್ತಾರೆ. ಶ್ರಾವಣ ಶನಿವಾರಗಳಂದು ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ.