ಮಂಗಳೂರು: ನಗರದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭೀಕರ ಹತ್ಯೆಯ ವಿಡಿಯೋ ವೈರಲ್ ಆಗಿದೆ.
2022ರ ಜುಲೈ 22ರಂದು ಮಂಗಳೂರಿನ ಸುರತ್ಕಲ್‌ನಲ್ಲಿ ಫಾಜಿಲ್ ಎಂಬ ಯುವಕನ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸುಹಾಸ್ ಶೆಟ್ಟಿ ಎಂದು ಹೇಳಲಾಗುತ್ತಿತ್ತು. ಫಾಜಿಲ್ ಹತ್ಯೆ ಪ್ರಕರಣವನ್ನು ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ ನಡೆಸಲಾಯಿತು ಎಂಬ ಆರೋಪವಿತ್ತು. ಇದೀಗ ಅದೇ ಸುಹಾಸ್ ಶೆಟ್ಟಿಯನ್ನು ಗಂಭೀರವಾಗಿ ಗಾಯಗೊಳಿಸಿ ಕೊಲೆ ಮಾಡಲಾಗಿದೆ ಎಂದು ವರದಿಯಾಗಿದೆ. ಹತ್ಯೆ ನಡೆದ ಸಂದರ್ಭದಲ್ಲಿ ಸುಹಾಸ್ ಶೆಟ್ಟಿ ಐವರು ಸಹಚರರೊಂದಿಗೆ ಕಾರಿನಲ್ಲಿ ಸಾಗುತ್ತಿದ್ದಾರೆ. ಇದೇ ವೇಳೆ ಇಬ್ಬರು ಜನ ಕಾರನ್ನು ಅಡ್ಡಗಟ್ಟಿ, ಸುಹಾಸ್ ಶೆಟ್ಟಿಯನ್ನು ಗುರಿಯಾಗಿಸಿಕೊಂಡು ಮಾರಕಾಸ್ತ್ರಗಳಿಂದ ದುಷ್ಕೃತ್ಯವೆಸಗಿದ್ದಾರೆ. ಈ ಘಟನೆಯ ನಂತರ ಬಜ್ಪೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣವನ್ನು ದಾಖಲಿಸಿದ್ದಾರೆ.
ಈ ಹತ್ಯೆಯನ್ನು ಖಂಡಿಸಿ ಹಿಂದೂ ಸಂಘಟನೆಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದ್‌ಗೆ ಕರೆ ನೀಡಿದ್ದು, ಇಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಎಲ್ಲಾ ವ್ಯಾಪಾರ-ವ್ಯವಹಾರಗಳು ಹಾಗೂ ವಾಹನ ಸಂಚಾರ ಸ್ಥಗಿತಗೊಳಿಸಲು ಕರೆ ನೀಡಲಾಗಿದೆ. ಬಂದ್ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ವ್ಯಾಪಕ ಭದ್ರತಾ ಕ್ರಮ ಕೈಗೊಳ್ಳಲಾಗಿದೆ. ಹಿಂಸಾಚಾರದ ಈ ಘಟನೆಗೆ ಪ್ರತಿಕ್ರಿಯಿಸಿದ ಹಿಂದೂ ಜಾಗರಣ ವೇದಿಕೆಯ ಶರಣ್ ಪಂಪ್‌ವೆಲ್ ಮಾತನಾಡಿ, “ಈ ಹತ್ಯೆ ಪೂರ್ವನಿಯೋಜಿತ ಕೃತ್ಯವಾಗಿದ್ದು, ಜಿಹಾದ್ ಇಸ್ಲಾಮಿಕ್ ಉಗ್ರರು ಇದನ್ನು ನಿರ್ವಹಿಸಿದ್ದಾರೆ” ಎಂದು ಆರೋಪಿಸಿದ್ದಾರೆ. “ಇದು ಕೇವಲ ವ್ಯಕ್ತಿಗತ ದ್ವೇಷವಲ್ಲ, ಹಿಂದೂ ಮುಖಂಡರ ವಿರುದ್ಧ ನಡೆದ ಉಗ್ರ ಕ್ರಮ” ಎಂದು ಅವರು ತಿಳಿಸಿದ್ದಾರೆ.














