1. ಪ್ರತಿದಿನವೂ ರಾತ್ರಿ ಮಲಗುವಾಗ ಒಂದೊಂದು ಬಾಳೆಹಣ್ಣನ್ನು ತಿನ್ನುತ್ತಾ ಬಂದರೆ ಮಲಬದ್ಧತೆ ಗುಣವಾಗುವುದು.
2. ಪ್ರತಿದಿನವೂ ಹಸಿ ಅಥವಾ ಬೇಯಿಸಿದ ತರಕಾರಿ,ಸೊಪ್ಪುಗಳನ್ನು ತಿನ್ನುತ್ತಿದ್ದರೆ ಮಲಬದ್ಧತೆ ನಿವಾರಣೆ ಆಗುವುದು.
3. ದ್ವಾದಸಿ ದಿವಸ ಮಲಬದ್ಧತೆ ನಿವಾರಣೆಗೆ ಅಗಸೇಸೊಪ್ಪಿನ ಪಲ್ಯ ಸೇವಿಸಲು ಆಚರಣೆಗೆ ತಂದಿದ್ದಾರೆ. ಇದನ್ನು ಆಗಾಗ ಸೇವಿಸುವುದರಿಂದ ಮಲಬದ್ಧತೆ ಗುಣವಾಗುವುದು.
4. ನಮ್ಮ ಆಹಾರದಲ್ಲಿ ಅನೇಕ ವಿಧವಾದ ಒಣ ಹಣ್ಣುಗಳು ಹಸಿ ಹಣ್ಣುಗಳನ್ನು ಸೇವಿಸುವುದರಿಂದ ಮಲಬದ್ಧತೆ ಹೇಳ ಹೆಸರಿಲ್ಲದೆ ಹೋಗುವುದು.
5. ಬೆಳಿಗ್ಗೆ ಎದ್ದ ತಕ್ಷಣ ಒಂದು ಲೋಟ ನೀರಿಗೆ ಒಂದು ಚಮಚ ಜೇನು ಹಾಕಿ ಕುಡಿಯುತ್ತಾ ಬಂದರೆ ಮಲಬದ್ಧತೆಯೇ ಉಂಟಾಗುವುದಿಲ್ಲ.
6. ಗಟ್ಟಿ ಮೊಸರನ್ನು ಒಂದು ಲೋಟದಷ್ಟುರಲ್ಲಿ ಬಾಳೆಹಣ್ಣನ್ನು ಹಾಕಿ ಮಿಕ್ಸರ್ ನಲ್ಲಿ ಅರೆದು ಸೇವಿಸುವುದರಿಂದ ಮಲಬದ್ಧತೆ ಇರುವುದಿಲ್ಲ.
7. ಒಂದೊಂದು ದಿವಸ ಒಂದೊಂದು ಕಾಳನ್ನು ಹಾಕಿ ಹುಳಿ ಮಾಡಿ ಸೇವಿಸುತ್ತಾ ಬರಬೇಕು. ಅದರ ಜೊತೆಗೆ ಸಾರನ್ನು ಉಪಯೋಗಿಸಬಹುದು 1.ಕಡಲೆಕಾಳು ಹುಳಿ 2.ಹೆಸರು ಕಾಳು ಹುಳಿ 3.ಅವರೆಕಾಳು ಉಳಿ 4.ಅಲಸಂದೆ ಕಾಳು ಹುಳಿ 5.ಹುರುಳಿಕಾಳಿನ ಹುಳಿ 6. ಬೇಳೆ ಹುಳಿ 7. ಬಟಾಣಿ ಕಾಳಿನ ಹುಳಿಯನ್ನು ವಾರಕ್ಕೆ ಒಂದು ಸಲದಂತೆ ಊಟ ಮಾಡಬೇಕು.
8. ಸೋಮವಾರ ಚಕ್ರ ಮುನಿ ಸೊಪ್ಪು, ಮಂಗಳವಾರ ಗೋಣಿಸೊಪ್ಪು,ಬುಧವಾರ ಹೊನಗೊನ್ನೆ ಸೊಪ್ಪು, ಗುರುವಾರ ಕೀರೆ ಸೊಪ್ಪು, ಶುಕ್ರವಾರ ಸಬ್ಬಸಿಗೆ ಸೊಪ್ಪು, ಶನಿವಾರ ಮೆಂತ್ಯ ಸೊಪ್ಪು, ಭಾನುವಾರ ದಂಟಿನ ಸೊಪ್ಪು, ಹೀಗೆ ಪ್ರತಿದಿನವೂ ಒಂದೊಂದು ಸೊಪ್ಪನ್ನು ಆಹಾರವಾಗಿ ಸೇವಿಸಿ.
9. ನವಿಲುಕೋಸು, ಬೀಟ್ರೂಟ್, ಎಲೆಕೋಸು, ಮೂಲಂಗಿ,ಸೂರಣ ಗಡ್ಡೆ,ಕ್ಯಾರೆಟ್, ಆಲೂಗಡ್ಡೆ, ಗೆಣಸು,ಕುಂಬಳಕಾಯಿ, ಬೂದು ಬೊಂಬಳಕಾಯಿಗಳನ್ನು ದಿವಸಕ್ಕೆ ಒಂದು ವಿಧದಂತೆ ತಿನ್ನುವುದರಿಂದ ಮಲಬದ್ಧತೆ ನಿವಾರಣೆ ಆಗುವುದು.
10. ರಾಗಿ ರೊಟ್ಟಿ,ಗೋಧಿ ರೊಟ್ಟಿ,ಅಕ್ಕಿ ರೊಟ್ಟಿ, ಜೋಳದ ರೊಟ್ಟಿ, ಸಂಜ್ಜೆರೊಟ್ಟಿ, ಆಕಾರದ ರೊಟ್ಟಿ, ಮುಸುಕಿನ ಜೋಳದ ರೊಟ್ಟಿ,ಇದರ ಜೊತೆಗೆ ಹಸಿ ತರಕಾರಿ ಕೋಸಂಬರಿ, ಬೇಯಿಸಿದ ತರಕಾರಿಗಳ ಸಾಗು, ಪಲ್ಯ, ಚಟ್ನಿ, ಉಪ್ಪಿನಕಾಯಿ, ಗೊಜ್ಜುಗಳನ್ನು ಮಾಡಿಕೊಂಡು ಹಸಿಮೆಣಸಿನಕಾಯಿ ಹಾಕಿ ಹೆಚ್ಚು ಖಾರವಿಲ್ಲದೆ ತಿಂದರೆ ಮಲಬದ್ಧತೆ ನಿವಾರಣೆಯಾಗುವುದು.
11. ಆಯಾ ಕಾಲದಲ್ಲಿ ಸಿಕ್ಕುವ ಕಲ್ಲಂಗಡಿ, ಕರಬೂಜ, ದ್ರಾಕ್ಷಿ, ಹಲಸಿನ ಹಣ್ಣು, ಸೇಬು, ದಾಳಿಂಬೆ ಹಣ್ಣು, ಸೀಬೆಹಣ್ಣು, ಮುಂತಾದವುಗಳನ್ನು ಫ್ರೂಟ್ ಸಾಲಡ್ ಮಾಡಿ ಊಟವಾದ ಮೇಲೆ ಸೇವಿಸಿರಿ. ಅದಕ್ಕೆ ದ್ರಾಕ್ಷಿ, ಗೋಡಂಬಿ, ಬಾದಾಮಿ,ಪಚ್ಚ ಕರ್ಪೂರ,ಏಲಕ್ಕಿ ಮಿಶ್ರ ಮಾಡಿ ತಿನ್ನುತ್ತಾ ಬನ್ನಿರಿ
12. ಪರಂಗಿ ಹಣ್ಣನ್ನು ಸೇವಿಸುವುದರಿಂದ ಹಾಗೂ ಪರಂಗಿಕಾಯಿಯನ್ನು ಕೋಸಂಬರಿ ರೂಪದಲ್ಲಿ ಸೇವಿಸಿದರೆ ಹೊಟ್ಟೆಯಲ್ಲಿನ ಹುಳಗಳು ಜಾರಿ ಬೀಳುವುದು.
13. ಸೊಪ್ಪಿನ ಕಷಾಯ ಮಾಡಿ ಮಗುವಿಗೆ ಕುಡಿಸಿದರೆ ಮಲ ಜಾರುತ್ತದೆ. ತರಕಾರಿಗಳ ರಸವನ್ನು ಕುಡಿಸುವುದರಿಂದ ಮಕ್ಕಳ ಮಲಬದ್ಧತೆ ನಿವಾರಣೆ ಆಗುವುದು.
14. ಆದಷ್ಟು ಹೆಚ್ಚಾಗಿ ನೀರು ಕುಡಿಯುವುದರಿಂದ ಮಲಬದ್ಧತೆ ಗುಣವಾಗುವುದು ಜಲ ಚಿಕಿತ್ಸೆಯಲ್ಲಿ ಪ್ರತಿದಿನ ಬೆಳಿಗ್ಗೆ ಒಂದು ಲೀಟರ್ ನೀರನ್ನು ಒಂದೇ ಸಾರಿಗೆ ಕುಡಿಯಬೇಕೆಂದು ಅನುಭವದಿಂದ ತಿಳಿದು ಬಂದಿದೆ.
15. ರಾತ್ರಿ ಮಲಗುವಾಗ ಎರಡು ಲೋಟ ಬಿಸಿ ನೀರನ್ನು ಕುಡಿದು ಮಲಗಿದರೆ ಬೆಳಿಗ್ಗೆ ಸಲೀಸಾಗಿ ಮಲ ವಿಸರ್ಜನೆ ಆಗುವುದು.
16. ಓಮಿನ ಕಾಳನ್ನು ಊಟವಾದ ಮೇಲೆ ಆಗಿದು ನೀರು ಕುಡಿಯುವ ಅಭ್ಯಾಸ ಮಾಡಿಕೊಂಡರೆ ಮಲಬದ್ಧತೆ ನಿವಾರಣೆ ಆಗುವುದು.














