ಮಡಿಕೇರಿ: ಮಡಿಕೇರಿ ಜಿಲ್ಲಾ ಕಾರಾಗೃಹದೊಳಗೆ ನಡೆದ ಹಲ್ಲೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಿಚಾರಣಾಧೀನ ಕೈದಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ನಡೆದಿದೆ.ಮೃತರನ್ನು ಟಿ. ಶೆಟ್ಟಿಗೇರಿ ನಿವಾಸಿ ಹೇಮಂತ್ (25) ಎಂದು ಗುರುತಿಸಲಾಗಿದೆ. ಜೂನ್ 1ರಂದು ಬೆಳಿಗ್ಗೆ ಸುಮಾರು 7.58ರ ವೇಳೆಗೆ ಕಾರಾಗೃಹದ ಅಡುಗೆಮನೆ ಸಮೀಪ ಈ ಘಟನೆ ನಡೆದಿತ್ತು.

ವಿಚಾರಣಾಧೀನ ಕೈದಿಗಳಾದ ಹೇಮಂತ್ ಮತ್ತು ರಾಜೇಶ್ ಎಲ್. ಎಸ್. ಅವರ ನಡುವೆ ಮಾತಿನ ಚಕಮಕಿ ನಡೆದು, ಬಳಿಕ ಅದು ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಇದೇ ವೇಳೆ ರಾಜೇಶ್, ಚಾಕುವಿನಿಂದ ಹೇಮಂತ್ ಅವರ ಎದೆ, ಹೊಟ್ಟೆ ಹಾಗೂ ಬೆನ್ನಿನ ಭಾಗಗಳಿಗೆ ಹಲವು ಬಾರಿ ಇರಿದಿದ್ದಾನೆ ಎನ್ನಲಾಗಿದೆ.
ಗಂಭೀರವಾಗಿ ಗಾಯಗೊಂಡ ಹೇಮಂತ್ ಅವರನ್ನು ಮೊದಲಿಗೆ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ. ಆರ್. ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ ಅವರು ಕೊನೆಯುಸಿರೆಳೆದಿದ್ದಾರೆ. ಈ ಕೃತ್ಯಕ್ಕೆ ಹಳೆಯ ವೈಷಮ್ಯವೇ ಕಾರಣ ಎನ್ನಲಾಗಿದೆ.
ರಾಜೇಶ್ ಅವರು 2024ರ ಅಕ್ಟೋಬರ್ ತಿಂಗಳಿಂದ ಕೊಲೆ ಪ್ರಕರಣವೊಂದರಲ್ಲಿ ಬಂಧಿತರಾಗಿ ಜೈಲಿನಲ್ಲಿದ್ದರು. ಇದೇ ವೇಳೆ ಹೇಮಂತ್ ಅವರನ್ನು ಈ ವರ್ಷದ ಮೇ ತಿಂಗಳಲ್ಲಿ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು.
ಆಸ್ತಿ ವಿವಾದದ ಹಿನ್ನೆಲೆ ರಾಜೇಶ್ ಅವರ ಸಹೋದರ ಗಣೇಶ್ ಮೇಲೆ ಹೇಮಂತ್ ಹಲ್ಲೆ ನಡೆಸಿದ್ದರು ಎಂಬ ಆರೋಪವಿದ್ದು, ಇದೇ ದ್ವೇಷ ಜೈಲಿನೊಳಗೂ ಮುಂದುವರಿದು ಈ ಹತ್ಯೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಪ್ರಕರಣದಲ್ಲಿ ಮತ್ತೊಂದು ಅಚ್ಚರಿಯ ಸಂಗತಿಯೆಂದರೆ, ಹೇಮಂತ್ ಅವರ ತಂದೆ, ತಾಯಿ ಹಾಗೂ ಸಹೋದರ ಕೂಡ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾಧೀನ ಕೈದಿಗಳಾಗಿ ಮಡಿಕೇರಿ ಜಿಲ್ಲಾ ಕಾರಾಗೃಹದಲ್ಲೇ ಇದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ರಾಜೇಶ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ.
ಇದರ ಜೊತೆಗೆ, ಕಾರಾಗೃಹದೊಳಗೆ ಚಾಕು ಹೇಗೆ ತಲುಪಿತು ಹಾಗೂ ಭದ್ರತಾ ವ್ಯವಸ್ಥೆಯಲ್ಲಿ ಯಾವುದೇ ಲೋಪವಾಗಿದೆಯೇ ಎಂಬ ವಿಚಾರದಲ್ಲೂ ಪೊಲೀಸರು ಮತ್ತು ಕಾರಾಗೃಹ ಇಲಾಖೆ ತನಿಖೆ ನಡೆಸುತ್ತಿದ್ದಾರೆ.













