ನವದೆಹಲಿ (New Delhi): ದೆಹಲಿ ಪೊಲೀಸರು ಮಾನವೀಯ ಹಾಗೂ ಮಹತ್ತರ ಹೆಜ್ಜೆಯನ್ನು ಇಟ್ಟಿದ್ದಾರೆ. ಹೌದು, ದೆಹಲಿ ಪೊಲೀಸರು ಇನ್ನು ಮುಂದೆ ಪ್ರತಿದಿನ ಸಂಜೆ ಒಬ್ಬಂಟಿಯಾಗಿ ವಾಸಿಸುತ್ತಿರುವ ವೃದ್ಧರ ಮನೆಗೆ ಭೇಟಿ ನೀಡಿ, ಯೋಗ-ಕ್ಷೇಮ ವಿಚಾರಿಸಲಿದ್ದಾರೆ.
ವೃದ್ಧರ ಜೊತೆಗೆ ಅವರ ಮಕ್ಕಳನ್ನು ದೂರವಾಣಿ ಅಥವಾ ವಿಡಿಯೋ ಕಾಲ್ ಮೂಲಕ ಸಂಪರ್ಕಿಸಿ, ಸಂಭಾಷಿಸುವ ಕಾರ್ಯದಲ್ಲಿ ತೊಡಗಲಿದ್ದಾರೆ. ದೆಹಲಿಯ ನೈಋತ್ಯ ಜಿಲ್ಲೆಯಲ್ಲಿ ವೃದ್ಧರ ಮನೆಗೆ ಭೇಟಿ ನೀಡುವ ಮಹತ್ತರ ಕಾರ್ಯ ಈಗಾಗಲೇ ಆರಂಭಗೊಂಡಿದೆ.
ದಕ್ಷಿಣ ದೆಹಲಿಯ ಸಫ್ದಾರ್‌ಜಂಗ್ ಎಂಕ್ಲೇವ್‌ನಲ್ಲಿ ಏಕಾಂಗಿಯಾಗಿ ನೆಲೆಸಿದ್ದ 93 ವರ್ಷದ ವೃದ್ಧೆ ಮನೆಯೊಳಗೆ ಮೃತಪಟ್ಟ ಘಟನೆಯ ಬಳಿಕ ಪೊಲೀಸರು ಈ ನಿರ್ಣಯಕ್ಕೆ ಬಂದಿದ್ದಾರೆ. ಪತಿ ಮೃತಪಟ್ಟ ನಂತರ ವೃದ್ಧೆ ಒಬ್ಬಂಟಿಯಾಗಿ ಹಲವು ವರ್ಷಗಳಿಂದ ಜೀವಿಸುತ್ತಿದ್ದರು. ಅಮೆರಿಕದಿಂದ ಆಕೆ ಮಗ ಬಂದು ಅಂತಿಮ ಸಂಸ್ಕಾರ ವಿಧಿ ನಡೆಸುವವರೆಗೆ ಐದು ದಿನಗಳ ಕಾಲ ಮೃತದೇಹವನ್ನು ಶವಾಗಾರದಲ್ಲಿ ಇರಿಸಲಾಗಿತ್ತು.
ಈ ಘಟನೆಯ ಬಳಿಕ ಒಬ್ಬಂಟಿಯಾಗಿ ಜೀವಿಸುತ್ತಿರುವ, ವಿದೇಶದಲ್ಲಿರುವ ಮಕ್ಕಳನ್ನು ಸಂಪರ್ಕಿಸಲು ಕಷ್ಟಪಡುತ್ತಿರುವ ವೃದ್ಧರ ಮನೆಗೆ ಭೇಟಿ ನೀಡಿ, ಕಾಳಜಿ ತೋರುವ ಮಹತ್ತರ ಹೆಜ್ಜೆಯನ್ನು ದೆಹಲಿ ಪೊಲೀಸರು ಇಟ್ಟಿದ್ದಾರೆ. ತಿಂಗಳುಗಳ ಕಾಲ ಮಕ್ಕಳು ಪೋಷಕರನ್ನು ಸಂಪರ್ಕಿಸದಿರುವುದು ಅಥವಾ ಮನೆಗೆ ಭೇಟಿ ನೀಡದಿರುವುದು ಕಂಡುಬಂದರೆ ತಿಳಿಸುವಂತೆ ಅಪಾರ್ಟ್‌ಮೆಂಟ್ ಭದ್ರತಾ ಸಿಬ್ಬಂದಿಗೆ ಕೋರಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಡಿಸಿಪಿ ಸಿ.ಮನೋಜ್ ಅವರು, ವೃದ್ಧರನ್ನು ಮಾತನಾಡಿಸಿದಾಗ ಪ್ರತಿಯೊಬ್ಬರು ಅವರ ಒಬ್ಬಂಟಿತನದ ಬಗ್ಗೆ ಮತ್ತು ಮಕ್ಕಳ ಜೊತೆ ಮಾತನಾಡುವ ಬಯಕೆಯ ಬಗ್ಗೆ ಹೇಳಿಕೊಳ್ಳುತ್ತಾರೆ. ಮಕ್ಕಳ ಕುಟುಂಬ ಸದಸ್ಯರ ಜೊತೆಗೂ ಮಾತನಾಡುವ ಹಂಬಲವನ್ನು ತೋರುತ್ತಾರೆ. ಇದರಿಂದ ಅವರಿಗೆ ಹೇಳಲಾಗದಷ್ಟು ಸಂತೋಷವಾಗುತ್ತದೆ. ಆದರೆ ಅವರ ಮಕ್ಕಳು ಅವರಿಗೆ ಎಂದಿಗೂ ಕರೆಯನ್ನೇ ಮಾಡುವುದಿಲ್ಲ ಅಥವಾ ಹಲವು ತಿಂಗಳಿಂದ ಸಂಪರ್ಕಿಸಿರುವುದಿಲ್ಲ ಎಂದು ವಿವರಿಸಿದರು.
ವೃದ್ಧರ ಮನೆಗೆ ಭೇಟಿ ನೀಡಲು ಸಂಜೆಯ ಸಮಯವನ್ನು ನಿರ್ಧರಿಸಲಾಗಿದೆ. ಕಾರಣ, ಹೆಚ್ಚಿನ ವೃದ್ಧರ ಮಕ್ಕಳು ಅಮೆರಿಕ ಸೇರಿದಂತೆ ಮತ್ತಿತರ ವಿದೇಶಗಳಲ್ಲಿ ನೆಲೆಸಿರುವುದರಿಂದ ಅವರನ್ನು ಇಂಟರ್‌ನೆಟ್ ಕರೆ ಮೂಲಕ ಸಂಪರ್ಕಿಸಲು ಸಂಜೆಯ ವೇಳೆ ಸೂಕ್ತವಾಗಿದೆ ಎಂದಿದ್ದಾರೆ.
ವೃದ್ಧರ ಮನೆಯಲ್ಲಿ ಭದ್ರತೆಯ ಪರಿಶೀಲನೆಗೆ, ತುರ್ತು ಸಹಾಯಕ್ಕೆ ಅನುಕೂಲವಾಗಿಸುವ ನಿಟ್ಟಿನಲ್ಲಿ ಕ್ಯಾಮೆರಾಗಳು ಮತ್ತು ತುರ್ತು ಸಹಾಯದ ಅಲಾರಂಗಳನ್ನು ಅಳವಡಿಸಲಿದ್ದಾರೆ. ಡೋರ್ ಚೈನ್, ಮ್ಯಾಜಿಕ್ ಐಸ್, ಐರನ್ ಗ್ರಿಲ್ಸ್ ಮತ್ತು ಸೇಫ್ಟಿ ಲಾಕ್ಸ್‌ಗಳನ್ನು ಹೊಂದುವಂತೆ ಹಿರಿಯ ನಾಗರಿಕರಿಗೆ ಸಲಹೆ ನೀಡಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ದೈನಂದಿನ ಮೂಲಭೂತ ಸೌಕರ್ಯಗಳು ಲಭ್ಯವಿವೆಯೇ, ಮನೆಕೆಲಸದವರು ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸುತ್ತಿದ್ದಾರೆಯೇ, ತರಕಾರಿ ಮತ್ತು ಹಣ್ಣಿನ ವ್ಯಾಪಾರಿಗಳು ನಿತ್ಯವೂ ಬಡವಾಣೆಗಳಿಗೆ ಭೇಟಿ ನೀಡುತ್ತಿದ್ದಾರೆ ಎಂಬಿತ್ಯಾದಿ ವಿಚಾರಗಳನ್ನು ಪೊಲೀಸರು ಪರಿಶೀಲಿಸಲಿದ್ದಾರೆ ಎಂದು ವಿವರಿಸಿದ್ದಾರೆ.
ನೈಋತ್ಯ ಜಿಲ್ಲೆಯಲ್ಲಿ 3,347 ವೃದ್ಧರು ಹಿರಿಯ ನಾಗರಿಕರ ಕೇಂದ್ರದಲ್ಲಿ ದಾಖಲಾತಿ ಮಾಡಿಕೊಂಡಿದ್ದಾರೆ. ಈ ಪೈಕಿ 1,167 ಮಂದಿ ಒಬ್ಬಂಟಿಯಾಗಿ ಜೀವಿಸುತ್ತಿದ್ದಾರೆ.