ಮನೆ ಕಾನೂನು ಮದುವೆಯಿಂದ ಪತಿಯ ಜಾತಿ ಪತ್ನಿಗೆ ಬರುವುದಿಲ್ಲ: ಕರ್ನಾಟಕ ಹೈಕೋರ್ಟ್

ಮದುವೆಯಿಂದ ಪತಿಯ ಜಾತಿ ಪತ್ನಿಗೆ ಬರುವುದಿಲ್ಲ: ಕರ್ನಾಟಕ ಹೈಕೋರ್ಟ್

0

ಬೆಂಗಳೂರು: ವಿವಾಹದ ನಂತರ ಪತಿಯ ಜಾತಿ ಪತ್ನಿಗೆ ವರ್ಗಾವಣೆಯಾಗುವುದಿಲ್ಲ. ಇನ್ನು ತಂದೆಯ ಜಾತಿಯನ್ನು ಜನ್ಮದ ಆಧಾರದ ಮೇಲೆ ಮಕ್ಕಳು ಪಡೆಯುತ್ತಾರೆ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ.

ತನ್ನ ಪತಿಯ ಜಾತಿಯ ಆಧರಿಸಿ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಲ್ಲಿ ಚುನಾವಣೆ ಸ್ಪರ್ಧಿಸಿ ಜಯಗಳಿಸಿದ್ದ ಶಿವಮೊಗ್ಗದ ಬಾಳೆಕೊಪ್ಪ ನಿವಾಸಿ ಎಂ.ಜಿ.ಅರ್ಚನಾ ಅವರ ಆಯ್ಕೆಯನ್ನು ಅಸಿಂಧುಗೊಳಿಸಿದ್ದ ಅಧೀನ ನ್ಯಾಯಾಲಯದ ತೀರ್ಪು ಪುರಸ್ಕರಿಸಿ ಹೈಕೋರ್ಟ್ ಈ ಸ್ಪಷ್ಟನೆ ನೀಡಿದೆ.

ಅರ್ಚನಾ ಹುಟ್ಟಿನಿಂದ ಪರಿಶಿಷ್ಟ ಪಂಗಡಕ್ಕೆ ಸೇರಿದವರಲ್ಲ. ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಯನ್ನು ವಿವಾಹವಾಗಿದ್ದರು. ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ಕ್ಷೇತ್ರದಿಂದ ಕಳೆದ ವರ್ಷ ನಡೆದಿದ್ದ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿ ಜಯಗಳಿಸಿದ್ದರು.

ಅವರ ಆಯ್ಕೆ ಅಸಿಂಧುಗೊಳಿಸುವಂತೆ ಕೋರಿ ಚುನಾವಣಾ ತಕರಾರು ನ್ಯಾಯಾಧಿಕರಣಕ್ಕೆ ಅಭಿಲಾಷ ಎಂಬುವರು ಅರ್ಜಿ ಸಲ್ಲಿಸಿದ್ದರು. ಅರ್ಜಿ ಪುರಸ್ಕರಿಸಿದ ಶಿವಮೊಗ್ಗದ 2ನೇ ಹೆಚ್ಚುವರಿ ಹಿರಿಯ ಸಿವಿಲ್‌ ನ್ಯಾಯಾಧೀಶರು, ಅರ್ಚನಾ ಆಯ್ಕೆ ಅನೂರ್ಜಿತಗೊಳಿಸಿ 2022ರ ಫೆ.1ರಂದು ಆದೇಶಿಸಿದ್ದರು.

ಅದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿರುವ ಅರ್ಚನಾ, ತಮ್ಮ ಪತಿ ಪರಿಶಿಷ್ಟಪಂಗಡಕ್ಕೆ ಸೇರಿದವರಾಗಿದ್ದಾರೆ. ಹೀಗಾಗಿ, ಅವರ ಜಾತಿ ತನಗೂ ಅನ್ವಯಿಸುತ್ತದೆ. ಆದ್ದರಿಂದ ಅಧೀನ ನ್ಯಾಯಾಲಯ ಆದೇಶ ರದ್ದುಪಡಿಸಬೇಕು. ಗ್ರಾಮ ಪಂಚಾಯ್ತಿ ಸದಸ್ಯ ಸ್ಥಾನವನ್ನು ಊರ್ಜಿತಗೊಳಿಸಬೇಕು ಎಂದು ಕೋರಿದ್ದರು. ಅರ್ಚನಾ ಮನವಿಯನ್ನು ಸಾರಾಸಗಟಾಗಿ ತಿರಸ್ಕರಿಸಿರುವ ಹೈಕೋರ್ಟ್‌, ಸಾಮಾನ್ಯವಾಗಿ ವ್ಯಕ್ತಿಯ ಜನ್ಮದಿಂದ ಜಾತಿ ನಿರ್ಧರಿಸಲಾಗುತ್ತದೆ. ತಂದೆ ಜಾತಿಯನ್ನು ಜನ್ಮದ ಆಧಾರ ಮೇಲೆ ಮಕ್ಕಳು ಪಡೆಯುತ್ತಾರೆ. ಆದರೆ, ವಿವಾಹದ ಬಳಿಕ ಪತಿಯ ಜಾತಿ ಪತ್ನಿಗೆ ವರ್ಗಾವಣೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿತು.

ಅಲ್ಲದೆ, ಪರಿಶಿಷ್ಟ ಜಾತಿ ಅಥವಾ ಪಂಗಡದಲ್ಲಿ ಹುಟ್ಟಿದವರು ಮಾತ್ರ ಆ ಜಾತಿಗೆ ಮೀಸಲು ಆಗಿರುವ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಬಹುದಾಗಿದೆ. ಆದರೆ, ಹುಟ್ಟಿನಿಂದ ಅರ್ಚನ ಪರಿಶಿಷ್ಟಪಂಗಡಕ್ಕೆ ಸೇರಿದವರಲ್ಲ. ಹೀಗಾಗಿ, ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ಸೀಟಿನಿಂದ ಅವರು ಸ್ಪರ್ಧಿಸಿ ಆಯ್ಕೆಯಾಗಿರುವುದನ್ನು ಊರ್ಜಿತಗೊಳಿಸಲು ಸಾಧ್ಯವಿಲ್ಲ ಎಂದು ತಿಳಿಸಿರುವ ಹೈಕೋರ್ಟ್‌ ಅರ್ಜಿ ವಜಾಗೊಳಿಸಿ ಆದೇಶಿಸಿದೆ.