ಕೋಲಾರ: ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಲ್ಲಿ ನಾನು ಮೊದಲ ಪಂಕ್ತಿಯಲ್ಲೂ ಇಲ್ಲ, ಎರಡನೇ ಪಂಕ್ತಿಯಲ್ಲೂ ಇಲ್ಲ. ನಾನೊಬ್ಬ ಕಾರ್ಯಕರ್ತ. ಪಕ್ಷವನ್ನು ಅಧಿಕಾರಕ್ಕೆ ತರುವುದು ನನ್ನ ಜವಾಬ್ದಾರಿ ಎಂದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಟಿಕೆಟ್ ಸಿಗದ ಕೆಲವರಿಗೆ ಬೇಸರ ಆಗಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು, ಎಲ್ಲರಿಗೂ ಸ್ಥಾನಮಾನ ನೀಡುವ ಪ್ರಯತ್ನ ಮಾಡುತ್ತೇವೆ. ಇನ್ನೂ 15 ಕ್ಷೇತ್ರಗಳ ಟಿಕೆಟ್ ಘೋಷಣೆ ಬಾಕಿ ಇದ್ದು, ಒಂದೆರಡು ದಿನಗಳಲ್ಲಿ ತೀರ್ಮಾನ ಆಗಲಿದೆ ಎಂದರು.
ಬಹಳ ಆಕಾಂಕ್ಷಿಗಳು ಇದ್ದ ಕಾರಣ ಮೂರನೇ ಪಟ್ಟಿ ಬಿಡುಗಡೆ ತಡವಾಯಿತು. ಒಮ್ಮತದ ತೀರ್ಮಾನದೊಂದಿಗೆ ಪಟ್ಟಿ ಬಿಡುಗಡೆ ಮಾಡಿದ್ದೇವೆ. ಪಕ್ಷದ ಪ್ರಮುಖ ನಾಯಕರು ಸೇರಿ ಬಹುತೇಕ ಅಭ್ಯರ್ಥಿಗಳು ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ ಎಂದರು.
ರಾಜ್ಯದಲ್ಲಿ ಬಿಜೆಪಿ ಅಧೋಗತಿಗೆ ತಲುಪಿದೆ. ಸುಮಾರು 67 ಕ್ಷೇತ್ರಗಳಲ್ಲಿ ಮಾಜಿ, ಹಾಲಿ ಶಾಸಕರು ರಾಜೀನಾಮೆ ನೀಡಿದ್ದಾರೆ. ಮತ್ತಷ್ಟು ಮಂದಿ ಬಿಜೆಪಿಯಿಂದ ಕಾಂಗ್ರೆಸ್’ಗೆ ಬರಲಿದ್ದು, ಮಾತುಕತೆ ನಡೆಯುತ್ತಿದೆ ಎಂದು ತಿಳಿಸಿದರು.
ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್ ಸ್ಪರ್ಧೆ ಬಗ್ಗೆ ಒತ್ತಡ ಇದೆ. ಈಗಾಗಲೇ ಆ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಘೋಷಿಸಿದ್ದೇವೆ. ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.














