ಮನೆ ರಾಜಕೀಯ ನನ್ನ ಬಳಿ ಕೋಟ್ಯಾಂತರ ರೂ. ಇದೆ, ನಾನೇಕೆ ಲಂಚ ಕೇಳಲಿ: ಮುನಿರತ್ನ

ನನ್ನ ಬಳಿ ಕೋಟ್ಯಾಂತರ ರೂ. ಇದೆ, ನಾನೇಕೆ ಲಂಚ ಕೇಳಲಿ: ಮುನಿರತ್ನ

0

ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಸಿಐಡಿಯ ವಿಶೇಷ ತನಿಖಾ ದಳ(ಎಸ್‌ಐಟಿ) ವಶದಲ್ಲಿರುವ ಶಾಸಕ ಮುನಿರತ್ನಗೆ ತನಿಖಾಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದು, ಆರೋಪಿಯಿಂದ ಮೌಖಿಕ ಹಾಗೂ ಲಿಖಿತ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

Join Our Whatsapp Group

ಈ ಮಧ್ಯೆ ಮುನಿರತ್ನ ಜಾಮೀನು ಅರ್ಜಿ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅ.1ಕ್ಕೆ ಮುಂದೂಡಿದೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಮುನಿರತ್ನ ಅವರನ್ನು ಬಾಡಿ ವಾರಂಟ್‌ ಮೇರೆಗೆ ಮಂಗಳವಾರ ವಶಕ್ಕೆ ಪಡೆದುಕೊಂಡಿದ್ದ ಎಸ್‌ಐಟಿ ಅಧಿಕಾರಿಗಳು, ಸಿಐಡಿ ಕಚೇರಿಗೆ ಕರೆದೊಯ್ದಿದ್ದರು.

ಬುಧವಾರ ಬೆಳಗ್ಗೆಯಿಂದಲೇ ಮುನಿರತ್ನ ವಿಚಾರಣೆ ಆರಂಭಿಸಲಾಗಿದ್ದು, ಮೊದಲ ದಿನದ ವಿಚಾರಣೆಯಲ್ಲಿ ಕೆಲವು ಪ್ರಶ್ನೆ ಕೇಳಲಾಯಿತು. ಲಂಚ ಬೇಡಿಕೆ, ಜಾತಿ ನಿಂದನೆ ಹಾಗೂ ಪ್ರಮುಖವಾಗಿ ಅತ್ಯಾಚಾರ ಪ್ರಕರಣದ ಕೆಲ ದಾಖಲೆಗಳನ್ನೂ ಆರೋಪಿ ಮುಂದಿಟ್ಟು ವಿಚಾರಿಸಲಾಯಿತು. ಆದರೆ, ಮುನಿರತ್ನ ತನಿಖೆಗೆ ಸಹಕಾರ ನೀಡುತ್ತಿಲ್ಲ.

“ನಾನು ಯಾರ ಜಾತಿಯನ್ನು ನಿಂದಿಸಿಲ್ಲ. ಲಂಚ ಬೇಡಿಕೆ ಅಗತ್ಯ ಇಲ್ಲ. ನನ್ನ ಬಳಿಯೇ ಕೋಟ್ಯಂತರ ರೂ. ಹಣವಿದೆ. ಸಿನಿಮಾ ನಿರ್ಮಾಪಕನಾಗಿದ್ದೇನೆ’ ಎಂದೆಲ್ಲ ಏರು ಧ್ವನಿಯಲ್ಲೇ ಉತ್ತರಿಸಿದ್ದಾರೆ.

ಇನ್ನು ಅತ್ಯಾಚಾರ ಪ್ರಕರಣ ಕುರಿತು, ಸಂತ್ರಸ್ತೆ ಎಷ್ಟು ದಿನಗಳಿಂದ ಪರಿಚಯವಿದ್ದಾರೆ. ಅಲ್ಲದೆ, ಆಕೆ ನಿಮ್ಮ ಮೇಲೆ ಎಚ್‌ಐವಿ ಸೋಂಕಿತೆ ಮೂಲಕ ಹನಿಟ್ರ್ಯಾಪ್‌ಗೆ ಮುಂದಾಗಿದ್ದಿರಿ ಎಂದೆಲ್ಲ ಆರೋಪಿಸಿದ್ದಾಳೆ ಎಂದೆಲ್ಲ ಪ್ರಶ್ನೆಗಳನ್ನು ಕೇಳಲಾಗಿದೆ. ಅದಕ್ಕೆ ಪ್ರತಿಕ್ರಿಯಿಸಿರುವ ಆರೋಪಿ, “ಯಾವ ಮಹಿಳೆ ಮೇಲೂ ಅತ್ಯಾಚಾರ ಮಾಡಿಲ್ಲ. ಎಚ್‌ಐವಿ ಸೋಂಕಿತೆ ಯಾರೆಂಬುದೇ ಗೊತ್ತಿಲ್ಲ. ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗಿದೆ’ ಎಂದಷ್ಟೇ ಉತ್ತರಿಸುತ್ತಿದ್ದಾರೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ. ಜತೆಗೆ ಆರೋಪಿ ಮೊಬೈಲ್‌ ಜಪ್ತಿ ಮಾಡಲಾಗಿದೆ. ಪರಿಶೀಲಿಸಲು ಸೈಬರ್‌ ತಜ್ಞರಿಗೆ ರವಾನಿಸಲಾಗಿದೆ. ಅತ್ಯಾಚಾರ ಪ್ರಕರಣದ ಸಂಬಂಧ ನ್ಯಾಯಾಲಯದ ಅನುಮತಿ ಪಡೆದು ಮತ್ತೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ತನಿಖಾಧಿಕಾರಿಗಳು ತಿಳಿಸಿದ್ಧಾರೆ.

ಅ.1ರಂದು ಜಾಮೀನು ಭವಿಷ್ಯ ನಿರ್ಧಾರ: ಶಾಸಕ ಮುನಿರತ್ನ ಪರ ವಕೀಲ ಅಶೋಕ್‌ ಹಾರನಹಳ್ಳಿ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ 82ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅ.1ಕ್ಕೆ ವಿಚಾರಣೆ ಮುಂದೂಡಿದೆ.