ಮೈಸೂರು : ನನ್ನ ಕೊನೆ ಉಸಿರು ಇರುವವರೆಗೂ ರಾಜಕೀಯದಲ್ಲಿ ಇದ್ದು, ಜನರ ಸೇವೆ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನ ವರಕೂಡು ಗ್ರಾಮದಲ್ಲಿ ಬೀರಶ್ವೇರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಈ ವೇಳೆ, ನಾನು ರಾಜಕೀಯದಲ್ಲಿ ಸೋಲು – ಗೆಲವು ಕಂಡಿದ್ದೇನೆ. ಸೋತಾಗಲೂ ಜನ ಸೇವೆ ಬಿಟ್ಟಿಲ್ಲ. ಈಗೀಗ ಕ್ಷೇತ್ರಕ್ಕೆ ಹೆಚ್ಚು ಬರಲು ಆಗುತ್ತಿಲ್ಲ. ನನ್ನ ಮಗ ಯತೀಂದ್ರ ಬರುತ್ತಾರೆ. ನನ್ನನ್ನು ಬೆಳೆಸಿದಂತೆ ಯತೀಂದ್ರನನ್ನು ರಾಜಕೀಯವಾಗಿ ಬೆಳೆಸಿ ಎಂದು ಕ್ಷೇತ್ರದ ಜನರಿಗೆ ಮನವಿ ಮಾಡಿದ್ದಾರೆ.
ದೇವರು ಇದ್ದಾನೆ, ಭಕ್ತಿ ಎಲ್ಲರಲ್ಲೂ ಇರಬೇಕು. ಶುದ್ಧವಾದ ಭಕ್ತಿ ಇಲ್ಲದೇ ಎಷ್ಟೇ ದೇವರ ದರ್ಶನ ಮಾಡಿದರೂ ಸಾರ್ಥಕ ಆಗಲ್ಲ. ನಿಷ್ಕಲ್ಮಶ ಭಕ್ತಿ ಇರಬೇಕು. ಯಾರನ್ನೂ ದ್ವೇಷಿಸುವ ಭಕ್ತಿ ಇರಬಾರದು. ನನಗೂ – ಬೇರೆಯವರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದರೆ ಮಾತ್ರ ದೇವರು ಒಲಿಯುತ್ತಾನೆ.
ದೇವರು ಒಬ್ಬನೆ ಇರೋದು. ದೇವರು ಎಲ್ಲಾ ಕಡೆ ಇರುತ್ತಾನೆ. ದೇವಸ್ಥಾನದಲ್ಲಿ ಮಾತ್ರ ಅಲ್ಲ, ಎಲ್ಲಾ ಕಡೆಯು ದೇವರಿದ್ದಾನೆ ಎಂದು ಇದೇ ವೇಳೆ ಅವರು ಮನಸ್ಸು ಬಿಚ್ಚಿ ಮಾತಾಡಿದ್ದಾರೆ. ಗ್ರಾಮಕ್ಕೆ ಆಗಮಿಸಿದ ಸಿಎಂಗೆ ಜನ ಜೆಸಿಬಿಯಲ್ಲಿ ಸೇಬಿನ ಹಾರ ಹಾಕಿ, ಹೂಮಳೆ ಸುರಿಸಿ ಸ್ವಾಗತಿಸಿದರು. ಈ ವೇಳೆ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಸಹ ಜೊತೆಗಿದ್ದರು.















