ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಸಂಚರಿಸುವ ಮಾರ್ಗದ ವೇಳಾಪಟ್ಟಿಯನ್ನು ರದ್ದು ಮಾಡಿದ್ದ ಐಸಿಸಿ ಇದೀಗ ಹೊಸ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಪಾಕ್ ಆಕ್ರಮಿತ ಪ್ರದೇಶಗಳಾದ ಮುಜಫರಾಬಾದ್, ಸ್ಕರ್ದು ಮತ್ತು ಹುಂಜಾ ಕ್ಯಾಲಿಯಲ್ಲಿ ಟ್ರೋಫಿಯನ್ನು ಪರೇಡ್ ಮಾಡುವುದನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಆಕ್ಷೇಪಿಸಿದ ನಂತರ ಐಸಿಸಿ ಟ್ರೋಫಿ ಪ್ರವಾಸದ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಯುವ ಟ್ರೋಫಿ ಪ್ರವಾಸದ ನಿರ್ದಿಷ್ಟ ಸ್ಥಳಗಳಿಗೆ ಹೊಸ ಐಸಿಸಿ ಮುಖ್ಯಸ್ಥರಾಗಲು ಸಿದ್ಧರಾಗಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ವರದಿಯಾಗಿದೆ.
ಶನಿವಾರ ಇಸ್ಲಮಾಬಾದ್‌ನಿಂದ ಐಸಿಸಿ ಟ್ರೋಫಿ ಸಂಚಾರ ಆರಂಭವಾಗಬೇಕಿತ್ತು. ಇದರ ವೇಳಾಪಟ್ಟಿಯನ್ನು ಐಸಿಸಿ ಅಧಿಕೃತವಾಗಿ ಪ್ರಕಟಿಸಬೇಕಿತ್ತು. ಆದರೆ ಗುರುವಾರ ಪಾಕ್ ಕ್ರಿಕೆಟ್ ಮಂಡಳಿ, ಪಿಒಕೆಯಲ್ಲೂ ಟ್ರೋಫಿ ಸಂಚರಿಸಲಿದೆ ಎಂದು ಟ್ವೀಟ್ ಮಾಡಿತ್ತು! ಇದು ಬಿಸಿಸಿಐ ಕೆಂಗಣ್ಣಿಗೆ ಕಾರಣವಾಗಿತ್ತು.
ಶನಿವಾರ, ಐಸಿಸಿ ಪುರುಷರ ಚಾಂಪಿಯನ್ಸ್ ಟ್ರೋಫಿಗಾಗಿ ತನ್ನ ‘ಗ್ಲೋಬಲ್ ಟ್ರೋಫಿ ಟೂರ್’ ಅನ್ನು ಘೋಷಿಸಿದೆ. ಇಸ್ಲಾಮಾಬಾದ್‌ನಲ್ಲಿ ಪ್ರವಾಸ ಆರಂಭವಾಗಲಿದೆ ಎಂದು ಐಸಿಸಿ ತಿಳಿಸಿದೆ.
ಟ್ರೋಫಿ ಪ್ರವಾಸದ ಪ್ರಮುಖ ದಿನಾಂಕಗಳು
16 ನವೆಂಬರ್ – ಇಸ್ಲಾಮಾಬಾದ್, ಪಾಕಿಸ್ತಾನ
17 ನವೆಂಬರ್ – ತಕ್ಷಿಲಾ ಮತ್ತು ಖಾನ್ಪುರ್, ಪಾಕಿಸ್ತಾನ
18 ನವೆಂಬರ್ – ಅಬೋಟಾಬಾದ್, ಪಾಕಿಸ್ತಾನ
19 ನವೆಂಬರ್- ಮುರ್ರೆ, ಪಾಕಿಸ್ತಾನ
20 ನವೆಂಬರ್- ನಥಿಯಾ ಗಲಿ, ಪಾಕಿಸ್ತಾನ
22 – 25 ನವೆಂಬರ್ – ಕರಾಚಿ, ಪಾಕಿಸ್ತಾನ
26 – 28 ನವೆಂಬರ್ – ಅಫ್ಘಾನಿಸ್ತಾನ
10 – 13 ಡಿಸೆಂಬರ್ – ಬಾಂಗ್ಲಾದೇಶ
15 – 22 ಡಿಸೆಂಬರ್ – ದಕ್ಷಿಣ ಆಫ್ರಿಕಾ
25 ಡಿಸೆಂಬರ್ – 5 ಜನವರಿ – ಆಸ್ಟ್ರೇಲಿಯಾ
6 – 11 ಜನವರಿ – ನ್ಯೂಜಿಲೆಂಡ್
12 – 14 ಜನವರಿ – ಇಂಗ್ಲೆಂಡ್
15 – 26 ಜನವರಿ – ಭಾರತ
27 ಜನವರಿ – ಈವೆಂಟ್ ಆರಂಭ – ಪಾಕಿಸ್ತಾನ