ನವದೆಹಲಿ: IRCTC ಬಳಕೆದಾರರು ತಮ್ಮ ಆಧಾರ್ ಜೊತೆ ಗುರುತಿನ ಐಡಿಯನ್ನು ಲಿಂಕ್ ಮಾಡಿದರೆ ತಿಂಗಳಿಗೆ 12ರ ಬದಲಿಗೆ 24 ಟಿಕೆಟ್ ಗಳನ್ನು ಬುಕ್ ಮಾಡಬಹುದಾಗಿದೆ.
ಈ ಬಗ್ಗೆ ಸ್ವತಃ ಭಾರತೀಯ ರೈಲ್ವೇ ಇಲಾಖೆ ಮಾಹಿತಿ ನೀಡಿದ್ದು, ಪ್ರಯಾಣಿಕರು ತಮ್ಮ ಬಳಕೆದಾರರ ಐಡಿಯನ್ನು ಆಧಾರ್‌ಗೆ ಲಿಂಕ್ ಮಾಡಿದರೆ IRCTC ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ನಲ್ಲಿ ಒಂದು ತಿಂಗಳಲ್ಲಿ 24 ರೈಲು ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಇಲ್ಲದಿದ್ದರೆ ಕೇವಲ 12 ಟಿಕೆಟ್‌ಗಳನ್ನು ಮಾತ್ರ ಖರೀದಿಸಬಹುದು ಎಂದು ರೈಲ್ವೆ ಸೋಮವಾರ ಪ್ರಕಟಿಸಿದೆ.
ಪ್ರಯಾಣಿಕರಿಗೆ ಅನುಕೂಲವಾಗುವಂತೆ, ಭಾರತೀಯ ರೈಲ್ವೇಯು ಆಧಾರ್ ಲಿಂಕ್ ಮಾಡದ ಬಳಕೆದಾರರ ಐಡಿ ಮೂಲಕ ಒಂದು ತಿಂಗಳಲ್ಲಿ ಗರಿಷ್ಠ 6 ಟಿಕೆಟ್‌ಗಳನ್ನು ಬುಕ್ ಮಾಡುವ ಮಿತಿಯನ್ನು 12 ಟಿಕೆಟ್‌ಗಳಿಗೆ ಹೆಚ್ಚಿಸಲು ನಿರ್ಧರಿಸಿದೆ ಮತ್ತು ಲಿಂಕ್ ಮಾಡಿದ ಬಳಕೆದಾರರಿಂದ ಒಂದು ತಿಂಗಳಲ್ಲಿ ಗರಿಷ್ಠ 12 ಟಿಕೆಟ್‌ಗಳನ್ನು ಬುಕ್ ಮಾಡುವ ಮಿತಿಯನ್ನು 24 ಟಿಕೆಟ್‌ಗಳಿಗೆ ಹೆಚ್ಚಿಸಲು ನಿರ್ಧರಿಸಿದೆ.
ಇಲ್ಲಿಯವರೆಗೆ, ಭಾರತೀಯ ರೈಲ್ವೇಸ್ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಶನ್ (IRCTC) ಖಾತೆಯನ್ನು ಆಧಾರ್‌ಗೆ ಸಂಪರ್ಕಿಸದಿದ್ದಲ್ಲಿ ತಿಂಗಳಿಗೆ ಆರು ಮತ್ತು ಲಿಂಕ್ ಮಾಡಿದ್ದರೆ ತಿಂಗಳಿಗೆ 12 ಟಿಕೆಟ್‌ಗಳನ್ನು ಬುಕ್ ಮಾಡಲು ಮಾತ್ರ ಜನರಿಗೆ ಅವಕಾಶ ಮಾಡಿಕೊಟ್ಟಿತ್ತು. ಇದೀಗ ಈ ಸಂಖ್ಯೆಯನ್ನು ಇಲಾಖೆ 24ಕ್ಕೆ ಏರಿಕೆ ಮಾಡಿದೆ.
ಆಧಾರ್ ಲಿಂಕ್ ಆಗಿರುವ ಐಡಿ ಮತ್ತು ಬುಕ್ ಮಾಡಬೇಕಾದ ಟಿಕೆಟ್‌ನಲ್ಲಿರುವ ಒಬ್ಬ ಪ್ರಯಾಣಿಕರನ್ನು ಆಧಾರ್ ಮೂಲಕ ಪರಿಶೀಲಿಸಬಹುದು ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಪದೇ ಪದೇ ಪ್ರಯಾಣಿಸುವವರಿಗೆ ಹಾಗೂ ಕುಟುಂಬ ಸದಸ್ಯರಿಗೆ ರೈಲು ಟಿಕೆಟ್ ಕಾಯ್ದಿರಿಸಲು ಇದೇ ಖಾತೆಯನ್ನು ಬಳಸುವವರಿಗೆ ಇದು ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.














