ಆಸ್ಪತ್ರೆಗೆ ದಾಖಲಿಸಲು ಆ್ಯಂಬುಲೆನ್ಸ್’ನಲ್ಲಿ ಸಾಗಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿದ ಪರಿಣಾಮ ಗಾಯಗಳಾಗಿ ರೋಗಿ ಸಾವನ್ನಪ್ಪಿದ ಪ್ರಕರಣದಲ್ಲಿ ಮೃತನ ಕಟುಂಬಸ್ಥರಿಗೆ ಪರಿಹಾರ ನೀಡುವುದರಿಂದ ತಪ್ಪಿಸಿಕೊಳ್ಳಲು ವಿಮಾ ಕಂಪೆನಿ ನಡೆಸಿದ ಪ್ರಯತ್ನಕ್ಕೆ ಹೈಕೋರ್ಟ್ ತಡೆಯೊಡ್ಡಿದೆ.
ಪ್ರಕರಣದಲ್ಲಿ ರೋಗಿಯ ಸಾವಿಗೂ ಅಪಘಾತಕ್ಕೂ ಯಾವುದೇ ಸಂಬಂಧವಿಲ್ಲ. ಕಾಯಿಲೆಯಿಂದಲೇ ರೋಗಿ ಸಾವನ್ನಪ್ಪಿದ್ದು, ಮೃತನ ಕುಟುಂಬಸ್ಥರಿಗೆ ಪರಿಹಾರ ನೀಡಲು ಮೋಟಾರು ವಾಹನ ಅಪಘಾತ ಪರಿಹಾರ ನ್ಯಾಯ ಮಂಡಳಿ (ಎಂವಿಸಿಟಿ) ಹೊರಡಿಸಿರುವ ಆದೇಶವನ್ನು ರದ್ದುಪಡಿಸಬೇಕು ಎಂಬ ವಿಮಾ ಕಂಪೆನಿಯೊಂದರ ಮನವಿಯನ್ನು ನ್ಯಾಯಮೂರ್ತಿ ಟಿ ಜಿ ಶಿವಶಂಕರೇಗೌಡ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.
ಆಸ್ಪತ್ರೆಗೆ ದಾಖಲಿಸಲು ಆ್ಯಂಬುಲೆನ್ಸ್ ಮೂಲಕ ಸಾಗಿಸುತ್ತಿದ್ದ ವೇಳೆ ಅಪಘಾತದ ಸಂಭವಿಸಿದ ಪರಿಣಾಮ ರೋಗಿ ತೀವ್ರವಾಗಿ ಗಾಯಗೊಂಡಿದ್ದಾರೆ. ಅದರಿಂದ ಕಾಯಿಲೆ ಉಲ್ಬಣಿಸಿ ರೋಗಿ ಸಾವನ್ನಪ್ಪಿದ್ದಾರೆ. ಆದ್ದರಿಂದ ಮೃತನ ಕುಟುಂಬದವರಿಗೆ ಪರಿಹಾರ ನೀಡಬೇಕು ಎಂದು ವಿಮಾ ಕಂಪೆನಿಗೆ ನ್ಯಾಯಾಲಯ ಆದೇಶಿಸಿದೆ.
ಎಫ್’ಎಸ್’ಎಲ್ ವರದಿಯಲ್ಲಿ ರವಿಯ ಸಾವು ಜಾಂಡೀಸ್ನಿಂದ ಸಂಭವಿಸಿರುವುದಾಗಿ ಉಲ್ಲೇಖವಾಗಿದೆ. ಆದರೆ, ಜಾಂಡೀಸ್ನಿಂದ ಬಳಲುತ್ತಿದ್ದ ಆತನನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ರವಾನಿಸಲಾಗುತ್ತಿತ್ತು. ಅಲ್ಲಿ ಚಿಕಿತ್ಸೆ ಕಲ್ಪಿಸಿದ್ದರೆ ಆತ ಗುಣಮುಖನಾಗಿ ಆಸ್ಪತ್ರೆಯಿಂದ ಹೊರಬರಬಹುದಾಗಿತ್ತು. ಜಾಂಡೀಸ್ ಮಾರಣಾಂತಿಕವಲ್ಲ. ರೋಗಿಯನ್ನು ಕರೆದೊಯ್ಯುತ್ತಿರುವ ಬಗ್ಗೆ ತಿಳಿವಳಿಕೆಯಿದ್ದರೂ ಚಾಲಕ ಆ್ಯಂಬುಲೆನ್ಸ್ ಅನ್ನು ಅಜಾಗರೂಕತೆಯಿಂದ ವಾಹನ ಚಲಾಯಿಸಿ ಅಪಘಾತಕ್ಕೆ ಕಾರಣನಾಗಿದ್ದಾನೆ. ಘಟನೆಯಲ್ಲಿ ಗಾಯಗಳಾದ ಪರಿಣಾಮ ಕಾಯಿಲೆ ಉಲ್ಬಣಗೊಂಡು ರವಿ ಮೃತಪಟ್ಟಿದ್ದಾರೆ. ಹೀಗಾಗಿ, ಆತನ ಸಾವು ಮತ್ತು ಅಪಘಾತಕ್ಕೆ ಸಂಬಂಧವಿದೆ ಎಂದು ನ್ಯಾಯಾಲಯ ತೀರ್ಮಾನಿಸಿದೆ.
ರವಿ ಮಾಸಿಕವಾಗಿ ದುಡಿಯುತ್ತಿದ್ದ ವೇತನದ ಅಂದಾಜು ಆಧರಿಸಿ ನ್ಯಾಯ ಮಂಡಳಿಯು ಪ್ರಕಟಿಸಿದ್ದ 5.5 ಲಕ್ಷ ರೂಪಾಯಿ ಪರಿಹಾರವನ್ನು 4.62 ಲಕ್ಷ ರೂಪಾಯಿಗೆ ಇಳಿಕೆ ಮಾಡಿದ ಹೈಕೋರ್ಟ್, ಆ ಮೊತ್ತವನ್ನು ಎಂಟು ವಾರದಲ್ಲಿ ಮೃತನ ಕುಟುಂಬದವರಿಗೆ ಪಾವತಿಸುವಂತೆ ವಿಮಾ ಕಂಪೆನಿಗೆ ನಿರ್ದೇಶಿಸಿದೆ.
ಪ್ರಕರಣದ ಹಿನ್ನೆಲೆ: ಚಿಕ್ಕಮಗಳೂರಿನ ಕಬ್ಬಿನಹಳ್ಳಿ ಗ್ರಾಮದ ನಿವಾಸಿ ರವಿ ಜಾಂಡೀಸ್ ಕಾಯಿಲೆಯಿಂದ ಬಳಲುತ್ತಿದ್ದರು. 2010ರ ಏಪ್ರಿಲ್ 13ರಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲು ಆ್ಯಂಬುಲೆನ್ಸ್’ನಲ್ಲಿ ಕರೆದೊಯ್ಯಲಾಗುತ್ತಿತ್ತು. ಬೆಳಗಿನ ಜಾವ 2.30ಕ್ಕೆ ವೇಗವಾಗಿ ಸಂಚರಿಸುತ್ತಿದ್ದ ಆ್ಯಂಬುಲೆನ್ಸ್ ಮುಗುಚಿ ಬಿದ್ದಿತ್ತು. ಇದರಿಂದ ಆ್ಯಂಬುಲೆನ್ಸ್ ಒಳಗಿದ್ದ ರವಿ ತೀವ್ರವಾಗಿ ಗಾಯಗೊಂಡಿದ್ದರು. ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
ಪ್ರಕರಣಕ್ಕೆ ಸಂಬಂಧಿಸಿದ ಪರಿಹಾರ ಕ್ಲೇಮಿನ ವಿಚಾರಣೆ ನಡೆಸಿದ್ದ ಮಂಗಳೂರಿನ ಎಂಎಸಿಟಿಯು ಮೃತನ ಕುಟುಂಬದವರಿಗೆ ವಾರ್ಷಿಕ ಶೇ.6ರಷ್ಟು ಬಡ್ಡಿ ದರದೊಂದಿಗೆ 5.50 ಲಕ್ಷ ರೂಪಾಯಿ ಪರಿಹಾರ ಪಾವತಿಸುವಂತೆ 2014ರ ಮಾರ್ಚ್ 3ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ವಿಮಾ ಕಂಪೆನಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು.
ವಿಮಾ ಕಂಪೆನಿ ಪರ ವಕೀಲರು, ನ್ಯೂಮೋನಿಯಾ ಹಾಗೂ ಕ್ಷಯರೋಗದಿಂದ ರವಿ ಮೃತಪಟ್ಟಿದ್ದಾರೆ ಹೊರತು ಅಪಘಾತದಿಂದ ಅಲ್ಲ ಎಂಬುದಾಗಿ ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್’ಎಸ್’ಎಲ್) ವರದಿ ಸ್ಪಷ್ಟಪಡಿಸಿದೆ. ಅದರಂತೆ ಯಾವ ಕಾಯಿಲೆಯಿಂದ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತೋ ಅದರಿಂದಲೇ ರವಿ ಮೃತಪಟಿದ್ದಾರೆ. ಹೀಗಾಗಿ ಮೃತನ ಸಾವಿಗೂ ಅಪಘಾತಕ್ಕೂ ಸಂಬಂಧವಿಲ್ಲದ ಕಾರಣ ನ್ಯಾಯ ಮಂಡಳಿ ಆದೇಶ ರದ್ದುಪಡಿಸಬೇಕು ಎಂದು ಕೋರಿದ್ದರು.