ಹೊಸದಿಲ್ಲಿ: ಮತ್ತೆ ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದರೆ, ಮುಂದಿನ ಸರ್ಕಾರದ ಕ್ರಿಯಾಯೋಜನೆ ಸಿದ್ಧಪಡಿಸುವಲ್ಲಿ ಉನ್ನತ ಅಧಿಕಾರಿಗಳ ತಂಡ ತಯಾರಿ ನಡೆಸುತ್ತಿದೆ ಎಂದು ವರದಿಯಾಗಿದೆ.
ಸಚಿವಾಲಯಗಳ ಸಂಖ್ಯೆಯನ್ನು ಪ್ರಸ್ತುತ ಇರುವ ೫೪ರಿಂದ ಕಡಿತಗೊಳಿಸುವುದು, ಮುಂದಿನ ಆರು ವರ್ಷಗಳಲ್ಲಿ ಸಾಗರೋತ್ತರ ಪ್ರದೇಶಗಳಲ್ಲಿ ಭಾರತೀಯ ಮಿಷನ್ ಅನ್ನು ಶೇಕಡ ೨೦ರಷ್ಟು ಹೆಚ್ಚಿಸಿ ೧೫೦ಕ್ಕೆ ಒಯ್ಯುವುದು, ಮೂಲಸೌಕರ್ಯದಲ್ಲಿ ಹೆಚ್ಚಿನ ಖಾಸಗಿ ಹೂಡಿಕೆಗೆ ಒತ್ತು ಮತ್ತು ಆದ್ಯತೆಯ ಯೋಜನೆಗಳಿಗೆ ಭೂಸ್ವಾಧೀನ ಪ್ರಕ್ರಿಯೆ ಸುಲಲಿತಗೊಳಿಸುವುದು ಮೋದಿಯವರ ಯೋಜನೆಯಲ್ಲಿರುವ ಪ್ರಮುಖ ಅಂಶಗಳಾಗಿವೆ.
ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆಯನ್ನು ೨೦೩೦ರ ಒಳಗಾಗಿ ಪ್ರಸ್ತುತ ಇರುವ ೫ ಕೋಟಿಯ ಬದಲಾಗಿ ೧ ಕೋಟಿಗಿಂತ ಕಡಿಮೆ ಮಾಡುವುದು, ಕೆಳಹಂತದ ನ್ಯಾಯಾಲಯಗಳಲ್ಲಿ ಪ್ರಕರಣಗಳ ಸರಾಸರಿ ವಿಚಾರಣಾ ಅವಧಿಯನ್ನು ೨೧೮೪ ದಿನಗಳಿಂದ ೧೦೦೦ ದಿನಗಳಿಗೆ ಇಳಿಸಲು ಉದ್ದೇಶಿಸಲಾಗಿದೆ. ಉನ್ನತ ಕೋರ್ಟ್ ಗಳಲ್ಲಿ ಈ ಪ್ರಮಾಣವನ್ನು ಪ್ರಸ್ತುತ ಇರುವ ೧೧೨೮ ದಿನಗಳಿಂದ ೫೦೦ ದಿನಗಳಿಗೆ ಇಳಿಸಲು ಉದ್ದೇಶಿಸಲಾಗಿದೆ. ಮುಂದಿನ ಆರು ವರ್ಷಗಳಲ್ಲಿ ನ್ಯಾಯಾಂಗದ ಖಾಲಿ ಹುದ್ದೆಗಳ ಪ್ರಮಾಣವನ್ನು ಶೇಕಡ ೨೨ ರಿಂದ ಶೇಕಡ ೧೦ಕ್ಕೆ ಇಳಿಸುವ ಗುರಿ ಹೊಂದಲಾಗಿದೆ ಎಂದು ಮೂಲಗಳು ವಿವರಿಸಿವೆ.