ಮಳವಳ್ಳಿ: ರಾಜ್ಯದ ಬರ ಪರಿಸ್ಥಿತಿ ಪರಿಹಾರಕ್ಕೆ ಕೇಂದ್ರ ಸರ್ಕಾರದ ಹಣ ಬಿಡುಗಡೆ ಮಾಡುವುದು ತಡವಾದರೆ, ರಾಜ್ಯ ಸರ್ಕಾರವೇ ರೈತರ ನೆರವಿಗೆ ನಿಲ್ಲಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ ತಿಳಿಸಿದರು.
ತಾಲ್ಲೂಕಿನ ಹಲಗೂರು,ಬಿ.ಜಿ.ಪುರ ಹೋಬಳಿಯಲ್ಲಿ ಬರ ಪರಿಸ್ಥಿತಿ ವೀಕ್ಷಿಸಿ ಮಾತನಾಡಿ,ರೈತರಿಗೆ ಧೈರ್ಯ ತುಂಬಿದರು.ಈ ಬಾರಿ ಮಳೆ ಕೊರತೆಯಿಂದ ಬೆಳೆಗಳು ಒಣಗಿ ರೈತರಿಗೆ ತುಂಬಾ ನಷ್ಟವಾಗಿದೆ. ಅನ್ನದಾತರ ಸಂಷ್ಟಕ್ಕೆ ನಮ್ಮ ಸರ್ಕಾರ ಸ್ಪಂದಿಸಲಿದೆ. ಇಂದಿನ ವರದಿಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು.
ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ೧೮ ಸಾವಿರ ಕೋಟಿ ರೂ. ಅನುದಾನವನ್ನು ಕೇಳಲಾಗಿದೆ. ಹಣ ಬಿಡುಗಡೆಯಾದ ನಂತರ ಹಂತ ಹಂತವಾಗಿ ಪರಿಹಾರ ವಿತರಿಸುವ ಕಾರ್ಯ ನಡೆಯಲಿದೆ ಎಂದರು.
ಒಣಗಿದ ಮುಸುಕಿನ ಜೋಳ, ರಾಗಿ ಸೇರಿದಂತೆ ಮತ್ತಿತರ ಬೆಳೆಗಳನ್ನು ವೀಕ್ಷಿಸಿ ರೈತರಿಗೆ ಪರಿಹಾರದ ಭರವಸೆ ನೀಡಿದ ಸಚಿವರು, ರೈತರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಬೇಕೆಂದು ಸೂಚಿಸಿದರು.
ರಾಜ್ಯದ ೨೨೪ ತಾಲ್ಲೂಕು ಕೂಡ ಬರ ಪೀಡಿತ ತಾಲ್ಲೂಕು ಎಂದು ಘೋಷಣೆಯಾಗಿದೆ. ಈಗಾಗಲೇ ಕೇಂದ್ರ ತಂಡ ರಾಜ್ಯದಲ್ಲಿ ಬರ ಅಧ್ಯಯನ ನಡೆಸಿ,ಕೇಂದ್ರಕ್ಕೆ ವರದಿ ಸಲ್ಲಿಸಿದೆ ಎಂದರು.
ರೈತರ ಕಷ್ಟಕ್ಕೆ ಸರ್ಕಾರ ಸ್ಪಂದಿಸುತ್ತದೆ. ರಾಜ್ಯ ಸರ್ಕಾರದ ಜನರ ಪರ ಕೆಲಸ ಮಾಡುತ್ತದೆ, ಬರಗಾಲದ ಸಂಕಷ್ಟದ ಸಮಯದಲ್ಲಿ ಬರ ಪರಿಹಾರಕ್ಕೆ ತುರ್ತು ಕ್ರಮ ವಹಿಸಲಿದೆ ಎಂದು ಹೇಳಿದರು
ಶಾಸಕ ಪಿ.ಎಂ.ನರೇAದ್ರಸ್ವಾಮಿ ಮಾತನಾಡಿ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಗಳು ಬರ ಪರಿಸ್ಥಿತಿಯಲ್ಲಿ ಜನರಲ್ಲಿ ವಿಶ್ವಾಸ ತುಂಬಿ ಆಶ್ರಯಕ್ಕೆ ನಿಂತಿದೆ.ಗೃಹ ಲಕ್ಷ್ಮಿ,ಅನ್ನ ಭಾಗ್ಯ,ಗೃಹ ಜ್ಯೋತಿ ಹಾಗೂ ಶಕ್ತಿ ಯೋಜನೆಗಳು ಆರ್ಥಿಕವಾಗಿ ಶಕ್ತಿ ತುಂಬಿದೆ ಎಂದರು.
ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್,ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.