ಬೆಂಗಳೂರು (Bengaluru)-ಅತ್ಯಾಚಾರ ಆರೋಪ ಪ್ರಕರಣದಲ್ಲಿ ದೂರುದಾರ ಮಹಿಳೆ ಮತ್ತು ಆರೋಪಿಗಳ ನಡುವೆ ರಾಜಿಯಾದರೆ ವಿಚಾರಣೆ ಮುಕ್ತಾಯಗೊಳಿಸಬಹುದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಅತ್ಯಾಚಾರ ಪ್ರಕರಣದಲ್ಲಿ ಉಭಯ ಪಕ್ಷದವರು ರಾಜಿಯಾಗಲು ಒಪ್ಪಿದ ಸಂದರ್ಭದಲ್ಲಿ ಆ ಪ್ರಕರಣವನ್ನು ನ್ಯಾಯಾಲಯ ಮುಕ್ತಾಯಗೊಳಿಸಲು ಕಾನೂನಿನಲ್ಲಿ ಅವಕಾಶವಿದೆ. ಆದ್ದರಿಂದ, ಅರ್ಜಿದಾರರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಲಾಗಿದೆ ಎಂದು ನ್ಯಾಯಪೀಠ ಹೇಳಿದೆ.
ತಮ್ಮ ಕುಟುಂಬದ ಸದಸ್ಯರ ವಿರುದ್ಧ ಮಹಿಳೆಯೊಬ್ಬರು ದಾಖಲಿಸಿದ್ದ ಅತ್ಯಾಚಾರ ಆರೋಪ ಪ್ರಕರಣವನ್ನು ರದ್ದುಪಡಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ದೂರುದಾರಳು ವಿವಾಹಿತೆಯಾಗಿದ್ದು, ಗಂಡನ ಜೊತೆಗೆ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಆರೋಪಿಗಳು ದೂರುದಾರಳ ಕುಟುಂಬದ ಸದಸ್ಯರೇ ಆಗಿದ್ದು, ಆರೋಪಿಗಳು ಮತ್ತು ದೂರುದಾರರು ರಾಜಿಯಾಗಲು ಸಲ್ಲಿಸಿರುವ ಜ್ಞಾಪನಾ ಪತ್ರವನ್ನು (ಮೆಮೊ) ಪರಿಗಣಿಸಬಹುದಾಗಿದೆ ಎಂದು ಹೇಳಿದೆ.
ನನ್ನ ಮೇಲೆ ಅತ್ಯಾಚಾರ ನಡೆಸಲಾಗಿದೆ, ಜೀವಕ್ಕೆ ಬೆದರಿಕೆ ಉಂಟು ಮಾಡಿ ಅವಮಾನ ಪಡಿಸಲಾಗಿದೆ ಮತ್ತು ಹಣ ವಸೂಲಿ ಮಾಡಲಾಗಿದೆ ಎಂದು ಆರೋಪಿಸಿ ನಗರದ 34 ವರ್ಷದ ಮಹಿಳೆಯೊಬ್ಬರು ತಮ್ಮ ಕುಟುಂಬದ ಇಬ್ಬರು ಪುರುಷರು ಹಾಗೂ ಇಬ್ಬರು ಮಹಿಳೆಯರ ವಿರುದ್ಧ 2022ರ ಫೆಬ್ರವರಿ 16ರಂದು ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಅನುಸಾರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ವೇಳೆ ಎಲ್ಲ ಆರೋಪಿಗಳು ಮತ್ತು ದೂರುದಾರ ಮಹಿಳೆ ಹೈಕೋರ್ಟ್‌ಗೆ ಹಾಜರಾಗಿ, ಪ್ರಕರಣವನ್ನು ರಾಜಿ ಮೂಲಕ ಮುಕ್ತಾಯಗೊಳಿಸಲು ಉದ್ದೇಶಿಸಿದ್ದೇವೆ ಎಂಬ ಜಂಟಿ ಮೆಮೊ ಸಲ್ಲಿಸಿದರು. ಅದನ್ನು ಮಾನ್ಯ ಮಾಡಿದ ನ್ಯಾಯಪೀಠ ಪ್ರಕರಣವನ್ನು ವಿಲೇವಾರಿ ಮಾಡಿದೆ. ಆರೋಪಿಗಳ ಪರ ಡಿ.ಮೋಹನಕುಮಾರ್ ಹಾಗೂ ದೂರುದಾರ ಮಹಿಳೆಯ ಪರ ಕೆ.ರಾಘವೇಂದ್ರಗೌಡ ಹಾಜರಾಗಿದ್ದರು.