ಜೀನ್ಸ್ ಧರಿಸಿ ನ್ಯಾಯಾಲಯಕ್ಕೆ ಹಾಜರಾದ ವಕೀಲರನ್ನು ನ್ಯಾಯಾಲಯದ ಆವರಣದಿಂದ ಹೊರಗೆ ಕಳಿಸುವಂತೆ ಕಳೆದ ವರ್ಷ ಹೊರಡಿಸಿದ್ದ ಆದೇಶದಲ್ಲಿ ಯಾವುದೇ ಮಾರ್ಪಾಡುಗಳನ್ನು ಮಾಡಲು ಗುವಾಹಟಿ ಹೈಕೋರ್ಟ್ ಇತ್ತೀಚೆಗೆ ನಿರಾಕರಿಸಿದೆ (ಬಿಜೋನ್ ಕುಮಾರ್ ಮಹಾಜನ್ ಮತ್ತು ಅಸ್ಸಾಂ ಸರ್ಕಾರ ನಡುವಣ ಪ್ರಕರಣ)
ಜೀನ್ಸ್ ಧರಿಸಿ ನ್ಯಾಯಾಲಯಕ್ಕೆ ಹಾಜರಾಗದಂತೆ ಭಾರತೀಯ ವಕೀಲರ ಪರಿಷತ್ತು (ಬಿಸಿಐ) ಆದೇಶಿಸಿದ್ದರೂ ಗುವಾಹಟಿ ಹೈಕೋರ್ಟ್ ನಿಯಮಗಳ ಅಡಿಯಲ್ಲಿ ಆ ಬಗ್ಗೆ ಸ್ಪಷ್ಟತೆ ಇಲ್ಲ ಎಂಬ ಆಧಾರದಲ್ಲಿ ಈ ಹಿಂದೆ ನೀಡಲಾಗಿದ್ದ ಆದೇಶ ಮಾರ್ಪಡಿಸುವಂತೆ ಕೋರಿದ್ದ ವಕೀಲ ಬಿಜನ್ ಕುಮಾರ್ ಮಹಾಜನ್ ಅವರನ್ನು ನ್ಯಾಯಮೂರ್ತಿ ಕಲ್ಯಾಣ್ ರಾಯ್ ಸುರಾನಾ ತರಾಟೆಗೆ ತೆಗೆದುಕೊಂಡರು.
ಆದೇಶ ಮಾರ್ಪಡಿಸಲು ಮನವಿ ಸಲ್ಲಿಸುವ ಮೂಲಕ ಮಹಾಜನ್ ಅವರು ಸಮಸ್ಯೆಯನ್ನು ಹೆಚ್ಚಿಸುತ್ತಿದ್ದಾರೆ ಇದು ನಿರೀಕ್ಷೆಗೂ ಮಿಗಿಲಾದ ಸಮಸ್ಯೆ ಸೃಷ್ಟಿಸಬಹುದು ಎಂದು ನ್ಯಾಯಾಲಯ ನುಡಿದಿದೆ.
“ನ್ಯಾಯಾಲಯದಲ್ಲಿ ಜೀನ್ಸ್ ಧರಿಸಲು ಅವಕಾಶ ನೀಡಿದರೆ ಗುವಾಹಟಿ ಹೈಕೋರ್ಟ್‌ನಲ್ಲಿ ನಿರ್ದಿಷ್ಟ ನಿಯಮಗಳಿಲ್ಲ ಎಂಬ ಕಾರಣಕ್ಕೆ ಅರ್ಜಿದಾರರು ಮುಂದೆ ಹರಿದ ಜೀನ್ಸ್ (ಟೋರ್ನ್ ಜೀನ್ಸ್), ಮಸುಕು ಜೀನ್ಸ್ (ಫೇಡೆಡ್ ಜೀನ್ಸ್), ಫ್ಯಾಷನ್ ಎಂದು ಪರಿಗಣಿಸಲಾಗುವ ಮುದ್ರಿತ ಪ್ಯಾಚ್ ಇರುವ ಜೀನ್ಸ್, ಇಲ್ಲವೇ ಕಪ್ಪು ಟ್ರ್ಯಾಕ್ ಪ್ಯಾಂಟ್ ಅಥವಾ ಕಪ್ಪು ಪೈಜಾಮಾದಲ್ಲಿ ಕಾಣಿಸಿಕೊಳ್ಳಲು ಅನುಮತಿಸಬಾರದೇಕೆ ಎಂದು ಕೇಳಬಹುದು” ಎಂಬುದಾಗಿ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.
2023ರ ಜನವರಿಯಲ್ಲಿ ನಿರೀಕ್ಷಣಾ ಜಾಮೀನು ಅರ್ಜಿಯೊಂದರ ವಿಚಾರಣೆ ವೇಳೆ, ವಕೀಲ ಜೀನ್ಸ್ ಧರಿಸಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಆಗ ಏಕಸದಸ್ಯ ಪೀಠ ಅವರನ್ನು ಹೈಕೋರ್ಟ್ ಆವರಣದಿಂದ ಹೊರಗೆ ಕರೆದೊಯ್ಯುವಂತೆ ಪೊಲೀಸರಿಗೆ ಆದೇಶಿಸಿತ್ತು.