ಮಂಡ್ಯ: ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಕುರಿತು ತನಿಖೆ ನಡೆಸಲು ರಚಿಸಲಾಗಿರುವ ವಿಶೇಷ ತನಿಖಾ ತಂಡದಲ್ಲಿ ಕರ್ನಾಟಕ ಪೊಲೀಸರು ಇದ್ದಾರೆ,ನಮ್ಮ ರಾಜ್ಯದ ಪೊಲೀಸರ ಮೇಲೆ ನಂಬಿಕೆ ಇಲ್ಲದಿದ್ದರೆ ಹೇಗೆ ಎಂದು ಮಾಜಿ ಸಚಿವ ಎಚ್. ವಿಶ್ವನಾಥ್ ಪ್ರಶ್ನಿಸಿದರು.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರಕರಣ ಕುರಿತು ಸಿಬಿಐ ತನಿಖೆಗೆ ಒತ್ತಡ ಹಾಕುತ್ತಿರುವುದು ಸರಿಯಲ್ಲ, ವಿಶೇಷ ತನಿಖಾ ತಂಡದಿಂದ ನ್ಯಾಯ ಸಿಗಲಿದೆ ಎಂದು ಹೇಳಿದರು.
ಅಶ್ಲೀಲ ವಿಡಿಯೋ ಪ್ರಕರಣ ವಿಚಾರದಲ್ಲಿ ಎಲ್ಲಾ ರಾಜಕಾರಣಿಗಳು ಸೇರಿ ಕರ್ನಾಟಕ ರಾಜ್ಯದ ಜನತೆಗೆ ಮಸಿ ಬಳಿಯುತ್ತಿದ್ದಾರೆ, ಪ್ರಕರಣ ಬೆಳಕಿಗೆ ಬಂದ ನಂತರ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದೆ, ಆದರೂ ಕೂಡ ಸುಖ ಸುಮ್ಮನೆ ಎಲ್ಲರೂ ಮಾತನಾಡುತ್ತಿದ್ದಾರೆ,ಇದು ಸರಿಯಲ್ಲ, ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ ಯಾದಿಯಾಗಿ ಎಲ್ಲರೂ ಸಹ ಕರ್ನಾಟಕದ ಜನತೆಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಪ್ರಕರಣದ ವಿಚಾರವಾಗಿ ಜಾತಿ ಮತ್ತು ಧರ್ಮ ಎಳೆದು ತರಲಾಗುತ್ತಿದೆ,ಎಲ್ಲರೂ ನಮ್ಮ ಸ್ನೇಹಿತರೆ ಆದರೆ ಈ ವಿಚಾರದಲ್ಲಿ ತಪ್ಪು ಮಾಡುತ್ತಿದ್ದಾರೆ ಪ್ರತಿಭಟನೆ, ಪರಸ್ಪರ ಆರೋಪ ಪ್ರತ್ಯಾರೋಪ ಮೂಲಕ ಕೆಸರೆರೆಚಾಟದಲ್ಲಿ ನಿರತರಾಗಿದ್ದಾರೆ ಎಂದು ತಿಳಿಸಿದರು.















