ಕೊಪ್ಪಳ: ಬಿಜೆಪಿ ಮಾತಿಗಷ್ಟೇ ಸಿದ್ದಾಂತವೆನ್ನುತ್ತದೆ. ಅಲ್ಲಿ ಯಾವ ತತ್ವವೂ ಇಲ್ಲ, ಸಿದ್ಧಾಂತವೂ ಇಲ್ಲ. ಆ ಪಕ್ಷದ ತತ್ವ, ಸಿದ್ಧಾಂತಗಳ ಮಾತು ಕೇಳಿದರೆ ವಾಂತಿ ಬರುತ್ತದೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಜನಾರ್ದನ ರೆಡ್ಡಿ ಹೇಳಿದರು.
ಕೊಪ್ಪಳ ತಾಲ್ಲೂಕಿನ ಇರಕಲ್ಗಡ ಗ್ರಾಮದಲ್ಲಿ ಸೋಮವಾರ ರಾತ್ರಿ ವಿಧಾನಪರಿಷತ್ ಮಾಜಿ ಸದಸ್ಯ ಕರಿಯಣ್ಣ ಸಂಗಟಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದರು.
ಹಿರಿಯ ನಾಯಕ ಜಗದೀಶ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಬಿಜೆಪಿಯಿಂದ ಹೊರಬಂದಿದ್ದಾರೆ. ಮಗನ ಸಲುವಾಗಿ ಯಡಿಯೂರಪ್ಪನವರು ಅಲ್ಲಿಯೇ ಉಳಿದುಕೊಂಡಿದ್ದಾರೆ ಎಂದರು.
ಹಿಂದೊಮ್ಮೆ ಇಕ್ಬಾಲ್ ಅನ್ಸಾರಿಯನ್ನು ಸೋಲಿಸಲು ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿ ಅವರನ್ನು ಬೆಂಬಲಿಸಿದ್ದೆ. ಈಗ ಗಂಗಾವತಿಯಿಂದ ಅವರಿಬ್ಬರ ಎದುರು ಫುಟ್ ಬಾಲ್ ಆಡಲು ಅವಕಾಶ ಸಿಕ್ಕಿದೆ. 12 ವರ್ಷಗಳ ಹಿಂದೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಚಿಸಲು ನಾನು ಪ್ರಮುಖ ಪಾತ್ರ ವಹಿಸಿದ್ದೆ. ಈಗ ಬಿಜೆಪಿಯಲ್ಲಿ ಇರುವವರು ತಂತ್ರ, ಕುತಂತ್ರ ಮಾಡಿ ತಮ್ಮ ಭವಿಷ್ಯ ರೂಪಿಸಿಕೊಳ್ಳುತ್ತಾರೆ. ಪಕ್ಷ ನಿಷ್ಠರನ್ನು ಹೊರ ದಬ್ಬುತ್ತಾರೆ ಎಂದು ಹರಿಹಾಯ್ದರು.
ಪಕ್ಷದ ವಕ್ತಾರ ಸಂಗಮೇಶ ಬಾದವಾಡಗಿ, ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲೇಶಪ್ಪ ಗುಮಗೇರಿ, ಮುಖಂಡರಾದ ಮಹಾಂತೇಶ ಸಂಗಟಿ, ಅಮರೇಶ ಹೊಸಮನಿ, ಗಂಗಾಧರಯ್ಯಸ್ವಾಮಿ ಇದ್ದರು.