ಚಂಡೀಗಢ:(Chandighad) ಅಂಗಡಿ ಮಾಲೀಕನಾದ ವಿಕಲಚೇತನ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿರುವ ಆರೋಪದ ಮೇಲೆ ಹರಿಯಾಣದ ವಿವಾದಿತ ಪೊಲೀಸ್ ಮಹಾನಿರ್ದೇಶಕ ಹೇಮಂತ್ ಕಲ್ಸನ್ ಅವರನ್ನು ಬಂಧಿಸಲಾಗಿದೆ.
ಈ ಹಿಂದೆ ಪಂಚಕುಲದ ಸೆಕ್ಟರ್ 6ರ ಸಿವಿಲ್ ಆಸ್ಪತ್ರೆಯ ಸ್ಟಾಫ್ ನರ್ಸ್‌ನೊಂದಿಗೆ ಅನುಚಿತವಾಗಿ ವರ್ತಿಸಿದ ಮತ್ತು ನಿಂದಿಸಿದ ಆರೋಪದ ಮೇಲೆ ಐಜಿಪಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಈಗ ಪಂಚಕುಲ ಜಿಲ್ಲೆಯ ಪಿಂಜೋರ್ ಪಟ್ಟಣದಲ್ಲಿ ಅಂಗಡಿ ಮಾಲೀಕರಾದ ವಿಕಲಚೇತನ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಆ ವೇಳೆಯೂ ಅವರು ಮದ್ಯದ ಅಮಲಿನಲ್ಲಿದ್ದರು ಎನ್ನಲಾಗಿದೆ.
ಹರಿಯಾಣ ಸರ್ಕಾರವು ಗೃಹ ರಕ್ಷಕ ದಳದ ಐಜಿಪಿಯಾಗಿರುವ ಕಲ್ಸನ್ ಅವರನ್ನು ಅಧಿಕಾರ ದುರುಪಯೋಗಪಡಿಸಿಕೊಂಡ ಮತ್ತು ಇಲಾಖೆಯ ಪ್ರತಿಷ್ಠೆಗೆ ಕಳಂಕ ತಂದ, ಗಂಭೀರ ದುಷ್ಕೃತ್ಯ ಎಸಗಿದ ಆರೋಪದ ಮೇಲೆ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ.
ಗುರುವಾರ ರಾತ್ರಿ ನಡೆದ ಪಿಂಜೋರ್ ಘಟನೆಯ ನಂತರ ಕಲ್ಸನ್ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, “ಹೆಚ್ಚು ಕುಡಿದ” ಸ್ಥಿತಿಯಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಐಜಿಪಿಯನ್ನು ಶುಕ್ರವಾರ ಪಿಂಜೋರ್‌ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.