ಮನೆ ಕಾನೂನು ಕೆಎಂಎಫ್ ನೇಮಕಾತಿಯಲ್ಲಿ ಅಕ್ರಮ ಪ್ರಕರಣ: ಅಂತಿಮ ಆಯ್ಕೆ ಪ್ರಕಟಿಸಿ, ನೇಮಕಾತಿ ಆದೇಶ ನೀಡಲು ಹೈಕೋರ್ಟ್ ಅನುಮತಿ

ಕೆಎಂಎಫ್ ನೇಮಕಾತಿಯಲ್ಲಿ ಅಕ್ರಮ ಪ್ರಕರಣ: ಅಂತಿಮ ಆಯ್ಕೆ ಪ್ರಕಟಿಸಿ, ನೇಮಕಾತಿ ಆದೇಶ ನೀಡಲು ಹೈಕೋರ್ಟ್ ಅನುಮತಿ

0

ಕರ್ನಾಟಕ ಹಾಲು ಮಹಾಮಂಡಲವು (ಕೆಎಂಎಫ್) 487 ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆಪಟ್ಟಿ ಪ್ರಕಟಿಸಲು ವಿಧಿಸಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಕರ್ನಾಟಕ ಹೈಕೋರ್ಟ್ ಗುರುವಾರ ತೆರವುಗೊಳಿಸಿದೆ. ಅಲ್ಲದೇ, ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲು ಕೆಎಂಎಫ್ಗೆ ಅನುಮತಿಸಿದ್ದು, ಇದು ಅರ್ಜಿಯ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ಸ್ಪಷ್ಟಪಡಿಸಿದೆ.

Join Our Whatsapp Group

ಚಿಕ್ಕಬಳ್ಳಾಪುರ ಜಿಲ್ಲೆಯ ಐತಪ್ಪನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ಸೇರಿ ಐದು ಸಂಘಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ಮತ್ತು ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“2023ರ ಮಾರ್ಚ್ 17ರಂದು ನೇಮಕಾತಿಯ ಅಂತಿಮ ಪಟ್ಟಿ ಪ್ರಕಟಿಸುವುದಕ್ಕೆ ನಿರ್ಬಂಧಿಸಿ ಮಾಡಿದ್ದ ಆದೇಶದಲ್ಲಿ ಮಾರ್ಪಾಡು ಮಾಡಲಾಗಿದೆ. ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆಪಟ್ಟಿಯನ್ನು ಕೆಎಂಎಫ್ ಪ್ರಕಟಿಸಬಹುದಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಬಹುದಾಗಿದ್ದು, ಅದರಲ್ಲಿ ನೇಮಕಾತಿಯು ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ಉಲ್ಲೇಖಿಸಬೇಕು” ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಡಿ ಆರ್ ರವಿಶಂಕರ್ ಅವರು “ಸಂದರ್ಶನಕ್ಕೂ ಮುನ್ನ ಅಭ್ಯರ್ಥಿಗೆ ತಾನು ಪಡೆದಿರುವ ಅಂಕದ ಬಗ್ಗೆ ತಿಳಿದುಕೊಳ್ಳಲು ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ಹೇಳಿದೆ” ಎಂದು ವಾದಿಸಿದರು. ಅಲ್ಲದೇ, “ಮಧ್ಯಂತರ ಆದೇಶ ತೆರವು ಮಾಡಿದರೆ, ನೇಮಕಾತಿ ಪತ್ರ ನೀಡದಂತೆ ಕೆಎಂಎಫ್ಗೆ ನಿರ್ಬಂಧಿಸಬೇಕು” ಎಂದು ಕೋರಿದರು.

ಕೆಎಂಎಫ್ ಪ್ರತಿನಿಧಿಸಿದ್ದ ಹಿರಿಯ ವಕೀಲ ಎಸ್ ಎಸ್ ನಾಗಾನಂದ್ ಅವರು “ಅಭ್ಯರ್ಥಿಗಳು ಪಡೆದಿರುವ ಅಂಕ ಪ್ರಕಟಿಸಿರುವುದರಿಂದ ಯಾವುದೇ ಅಭ್ಯರ್ಥಿಗೆ ತಾನು ಪಡೆದಿರುವ ಅಂಕದ ಬಗ್ಗೆ ಅಹವಾಲುಗಳಿದ್ದರೆ ಅದನ್ನು ಸಕ್ಷಮ ಪ್ರಾಧಿಕಾರದ ಮುಂದೆ ನಿರ್ದಿಷ್ಟ ಕಾಲಮತಿಯಲ್ಲಿ ಪ್ರಶ್ನಿಸಲು ಅನುಕೂಲವಾಗಲಿದೆ. ಇದು ಅಭ್ಯರ್ಥಿಗಳ ದೃಷ್ಟಿಯಿಂದ ಅನುಕೂಲಕಾರಿ. ವಿವಿಧ ಹುದ್ದೆಗಳಿಗೆ ಆಯ್ಕೆಯಾದವರಿಗೆ ನೇಮಕಾತಿ ಆದೇಶ ನೀಡದಿರುವುದು ಪೂರ್ವಾಗ್ರಹ ಉಂಟು ಮಾಡಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ನೀಡಲಾಗುವ ನೇಮಕಾತಿ ಆದೇಶದಲ್ಲಿ ತಮ್ಮ ಆಯ್ಕೆಯು ಅರ್ಜಿಯ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂಬ ಅಂಶವನ್ನು ಉಲ್ಲೇಖಿಸಲಾಗುತ್ತದೆ” ಎಂದರು. 

ಮೂರನೇ ಪ್ರತಿವಾದಿ ಗುಜರಾತ್ನ ಆನಂದ್ ಜಿಲ್ಲೆಯ ಗ್ರಾಮೀಣ ನಿರ್ವಹಣೆ ಸಂಸ್ಥೆ (ಐಎಂಆರ್ಎ) ಪ್ರತಿನಿಧಿಸಿದ್ದ ಹಿರಿಯ ವಕೀಲ ಉದಯ್ ಹೊಳ್ಳ ಅವರು “ಐಆರ್ಎಂಎ ಅನ್ನು ಪರೀಕ್ಷೆ ನಡೆಸುವ ಏಜೆನ್ಸಿಯಾಗಿ ಆಯ್ಕೆ ಮಾಡಲಾಗಿದೆ. ಆದರೆ, ಈ ಸಂಸ್ಥೆಗೆ ಯಾವುದೇ ಅನುಭವವಿಲ್ಲ ಎಂಬ ವಾದವನ್ನು ಒಪ್ಪಲಾಗದು. ತಮ್ಮ ಕಕ್ಷಿದಾರರು ಸೇವೆ ನೀಡುತ್ತಿರುವ ಕ್ಲೈಂಟ್ ಬಗ್ಗೆ ಸಂಪೂರ್ಣವಾದ ಗೌಪ್ಯತೆ ಕಾಪಾಡಿದ್ದಾರೆ. ಟೆಂಡರ್ ಪ್ರಕ್ರಿಯೆಯ ಮೂಲಕ ಏಜೆನ್ಸಿಯನ್ನು ನೇಮಕಾತಿ ಸೇವೆಗೆ ಆಯ್ಕೆ ಮಾಡಲಾಗಿದೆ” ಎಂದು ಸಮರ್ಥಿಸಿದರು. ಅಂತಿಮವಾಗಿ ನ್ಯಾಯಾಲಯವು ಅರ್ಜಿಯ ವಿಚಾರಣೆಯನ್ನು ಜೂನ್ 13ಕ್ಕೆ ಮುಂದೂಡಿದೆ.

ಪ್ರಕರಣದ ಹಿನ್ನೆಲೆ: ಕಳೆದ ವರ್ಷ ಅಕ್ಟೋಬರ್ 20ರಂದು 487 ಹುದ್ದೆಗಳ ನೇಮಕಕ್ಕೆ ಕೆಎಂಎಫ್ ಅಧಿಸೂಚನೆ ಹೊರಡಿಸಿತ್ತು. ನೇಮಕಾತಿ ಪ್ರಕ್ರಿಯೆಯ ಜವಾಬ್ದಾರಿಯನ್ನು ಗುಜರಾತ್ ಮೂಲದ ಇನ್ಸ್ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್ಮೆಂಟ್ ಏಜೆನ್ಸಿಗೆ ವಹಿಸಲಾಗಿತ್ತು. ಪರೀಕ್ಷೆ ನಂತರ 2023ರ ಫೆಬ್ರವರಿ 2ರಿಂದ 28ವರೆಗೆ ಸಂದರ್ಶನ ನಡೆಸಿ, ಅಂತಿಮ ಆಯ್ಕೆ ಪಟ್ಟಿ ಸಿದ್ಧಪಡಿಸಲಾಗಿದೆ.