ಮನೆ ಅಪರಾಧ ಅಕ್ರಮ ಚಿನ್ನ ಸಾಗಾಟ ಪ್ರಕರಣ: ರನ್ಯಾ ರಾವ್ ಮನೆಯಲ್ಲಿದ್ದ ಚಿನ್ನ, ನಗದು ವಶಕ್ಕೆ

ಅಕ್ರಮ ಚಿನ್ನ ಸಾಗಾಟ ಪ್ರಕರಣ: ರನ್ಯಾ ರಾವ್ ಮನೆಯಲ್ಲಿದ್ದ ಚಿನ್ನ, ನಗದು ವಶಕ್ಕೆ

0

ಬೆಂಗಳೂರು: ವಿದೇಶದಿಂದ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಆರೋಪದಡಿ ಬಂಧಿಸಲ್ಪಟ್ಟಿರುವ ನಟಿ ರನ್ಯಾ ರಾವ್ ಅವರ ಮನೆಯಲ್ಲಿಯೂ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ಶೋಧ ನಡೆಸಿದ್ದಾರೆ.

Join Our Whatsapp Group

ಸೋಮವಾರ ರಾತ್ರಿ ರನ್ಯಾ ರಾವ್ ಅವರನ್ನು ವಶಕ್ಕೆ ಪಡೆದ ಬಳಿಕ ಅವರು ವಾಸವಿದ್ದ ನಗರದ ಲ್ಯಾವೆಲ್ಲೆ ರಸ್ತೆಯಲ್ಲಿರುವ ಫ್ಲ್ಯಾಟ್‌ನಲ್ಲಿ ಡಿಆರ್​ಐ ಅಧಿಕಾರಿಗಳ ತಂಡ ಶೋಧ ನಡೆಸಿದ್ದು, ಈ ವೇಳೆ 2.06 ಕೋಟಿ ರೂ. ಮೌಲ್ಯದ ಚಿನ್ನ ಹಾಗೂ 2.67 ಕೋಟಿ ರೂ. ನಗದು ಸೇರಿದಂತೆ ಕೆಲ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು‌ ತಿಳಿಸಿವೆ.

ವಿದೇಶದಿಂದ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಆರೋಪದಡಿ ನಟಿ ರನ್ಯಾ ರಾವ್ ಅವರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಸೋಮವಾರ ರಾತ್ರಿ ಎಮಿರೇಟ್ಸ್ ಏರ್‌ಲೈನ್ಸ್ ಮೂಲಕ ದುಬೈನಿಂದ ಬೆಂಗಳೂರಿಗೆ ಬಂದಿಳಿದ ರನ್ಯಾ ರಾವ್ ಅವರನ್ನು 14.8 ಕೆ.ಜಿ ಚಿನ್ನದ ಸಮೇತ ಡಿಆರ್​ಐ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಬಳಿಕ ವೈದ್ಯಕೀಯ ತಪಾಸಣೆಗೊಳಪಡಿಸಿ ಕೋರಮಂಗಲದಲ್ಲಿರುವ ನ್ಯಾಯಾಧೀಶರ ನಿವಾಸದ ಮುಂದೆ ರನ್ಯಾ ರಾವ್ ಅವರನ್ನು ಹಾಜರುಪಡಿಸಲಾಗಿತ್ತು. ಮಾರ್ಚ್ 18ರ ವರೆಗೂ ರನ್ಯಾ ರಾವ್ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಧೀಶರು ಆದೇಶಿಸಿದ್ದರು.

ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿಯೊಬ್ಬರ ಹತ್ತಿರದ ಸಂಬಂಧಿ ಎನ್ನಲಾಗಿರುವ ರನ್ಯಾ ರಾವ್, ಕನ್ನಡದಲ್ಲಿ ‘ಮಾಣಿಕ್ಯ’, ‘ಪಟಾಕಿ’ ಹಾಗೂ ತಮಿಳಿನ ‘ವಾಘಾ’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಭಾರತ ಹಾಗೂ ದುಬೈ ನಡುವೆ ನಿರಂತರವಾಗಿ ಪ್ರಯಾಣಿಸುತ್ತಿದ್ದ ರನ್ಯಾ ರಾವ್ ಕುರಿತು ಕಂದಾಯ ಗುಪ್ತಚರ ಇಲಾಖೆಯ ಅಧಿಕಾರಿಗಳು ನಿಗಾ ವಹಿಸಿದ್ದರು. ಕಳೆದ 15 ದಿನಗಳ ಅವಧಿಯಲ್ಲಿ 4 ಬಾರಿ ರನ್ಯಾ ರಾವ್ ದುಬೈಗೆ ತೆರಳಿ ಪಾಪಸ್ ಮರಳಿದ್ದರು. ಸೋಮವಾರ ರಾತ್ರಿ ರನ್ಯಾ ರಾವ್ ಬೆಂಗಳೂರಿಗೆ ಬಂದಿಳಿಯಲಿರುವ ಮಾಹಿತಿ ಪಡೆದಿದ್ದ ಕಂದಾಯ ಗುಪ್ತಚರ ಅಧಿಕಾರಿಗಳು ರನ್ಯಾ ಚಿನ್ನದ ಸಮೇತ ರನ್ಯಾ ರಾವ್ ಅವರನ್ನು ವಶಕ್ಕೆ ಪಡೆದಿದ್ದರು.

ಹೆಚ್ಚಿನ ಚಿನ್ನಾಭರಣಗಳನ್ನು ಧರಿಸಿದ್ದ ರನ್ಯಾ ರಾವ್, ಉಳಿದ ಚಿನ್ನವನ್ನು ಬಟ್ಟೆಯಲ್ಲಿ ಬಚ್ಚಿಟ್ಟಿದ್ದರು. ಏರ್‌ ಪೋರ್ಟ್‌ ನಲ್ಲಿ ತಾನು ಡಿಜಿಯವರ ಪುತ್ರಿ ಎಂದು ಹೇಳುತ್ತಿದ್ದ ರನ್ಯಾ, ಅದೇ ಲಾಭ ಪಡೆದುಕೊಂಡು ತಪಾಸಣೆಯಿಂದ ತಪ್ಪಿಸಿಕೊಂಡು ತೆರಳುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿತ್ತು.