ಮನೆ ರಾಜಕೀಯ ನಾನು ಪಕ್ಷ ಬಿಡುವುದು ಖಚಿತ: ಎಂಎಲ್ ಸಿ ಮರಿತಿಬ್ಬೇಗೌಡ

ನಾನು ಪಕ್ಷ ಬಿಡುವುದು ಖಚಿತ: ಎಂಎಲ್ ಸಿ ಮರಿತಿಬ್ಬೇಗೌಡ

0

ಮೈಸೂರು(Mysuru): ನಾನು ಪಕ್ಷ ಬಿಡುವುದು ಖಚಿತ, ಮುಂದೆ ಜೆಡಿಎಸ್ ನಿಂದ ಯಾವುದೇ ಕಾರಣಕ್ಕೂ ಸ್ಪರ್ಧೆ  ಮಾಡಲ್ಲ ಎಂದು ಜೆಡಿಎಸ್ ಎಂಎಲ್ ಸಿ ಮರಿತಿಬ್ಬೇಗೌಡ ಇಂದು ಸ್ಪಷ್ಟಪಡಿಸಿದ್ದಾರೆ.

ಮಂಗಳವಾರ ಏರ್ಪಡಿಸಲಾಗಿದ್ದ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆಗೆ ಕೀಲಾರ ಜಯರಾಂಗೆ ಟಿಕೆಟ್ ನೀಡದ ಹಿನ್ನೆಲೆ ಅಸಮಾಧಾನಗೊಂಡಿರುವ ಅವರು ಪಕ್ಷ ತೊರೆಯುವುದಾಗಿ ಹೇಳಿಕೆ ನೀಡಿದ್ದಾರೆ.

ಜೆಡಿಎಸ್ ಕಾರ್ಯಕರ್ತರಾಗಿ ದುಡಿದ ಜಯರಾಂಗೆ ವಿಧಾನ ಪರಿಷತ್ ಚುನಾವಣೆ ಟಿಕೆಟ್ ಕೊಡಲಿಲ್ಲ. ಜಯರಾಂ ಬಳಿ ಹಣ ಇಲ್ಲ ಎಂದು ಟಿಕೆಟ್ ನಿರಾಕರಿಸಲಾಗಿತ್ತು. ಜೆಡಿಎಸ್ ಕಾರ್ಯಕರ್ತನಲ್ಲದ  ಹಣ ಇರುವ ವ್ಯಕ್ತಿಗೆ ಟಿಕೆಟ್ ಕೊಡಲಾಗಿದೆ ಎಂದು ಆರೋಪಿಸಿದ್ದಾರೆ.

ನಾನು ಹೇಳಿದ್ದನ್ನು ಎಚ್.ಡಿ. ಕುಮಾರಸ್ವಾಮಿ ತಿರುಚಿದ್ದಾರೆ. ನಾನು ದುಡ್ಡು ತೆಗೆದು ಕೊಂಡು ಟಿಕೆಟ್ ಕೊಟ್ಟಿದ್ದಾರೆ ಎಂದು ಹೇಳಿಲ್ಲ. ಹಣ ಇರುವವರಿಗೆ ಟಿಕೆಟ್ ಕೊಟ್ಟಿದ್ದಾರೆ ಎಂದು ಹೇಳಿದ್ದೇನೆ. ದುಡ್ಡಿಗಾಗಿ ಟಿಕೆಟ್ ಮಾರಿ ಕೊಂಡಿದ್ದಾರೆ ಎಂದು ನಾನು ಹೇಳಿಯೇ ಇಲ್ಲ.  ಎಚ್.ಡಿ ಕುಮಾರಸ್ವಾಮಿ ನನ್ನ ಮಾತು ತಿರುಚಿದ್ದಾರೆ. ಈ‌ ಹಿಂದೆ ಪ್ರಜ್ವಲ್ ರೇವಣ್ಣ, ಜೆಡಿಎಸ್ ನಲ್ಲಿ ಸೂಟಕೇಸ್ ಇದ್ದವರಿಗೆ ಮೊದಲ ಸ್ಥಾನ ಎಂದು ಹೇಳಿದ್ದರು. ಅವತ್ತು ಎಚ್.ಡಿಕೆ ಏನೂ ಮಾತಾಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನನಗೆ ಮೂರು ವರ್ಷ ವಿಧಾನ ಪರಿಷತ್ ನ ಉಪಸಭಾಪತಿಯಾಗಿ ಜೆಡಿಎಸ್ ಮಾಡಿದೆ. ನನಗೆ ವಾಸ ಮಾಡಲು ಮೈಸೂರಿನಲ್ಲಿ ಸ್ವಂತ ಮನೆ ಇಲ್ಲ.  ಇಲ್ಲಿ ಮನೆ ಕಟ್ಟೋಕೆ ಶುರು ಮಾಡಿ ಮೂರು ವರ್ಷವಾಯ್ತು. ಇನ್ನೂ ನನ್ನ ಕೈಯಲ್ಲಿ ಮನೆ ಮುಗಿಸಲು ಆಗಿಲ್ಲ. ನನ್ನ ಬದುಕು ತೆರೆದ ಪುಸ್ತಕ. ನನ್ನ ಬಗ್ಗೆ ಅನುಮಾನ ಬರುವ ರೀತಿ ಯಾಕೆ ಮಾತಾಡುತ್ತಿರಿ.? ಉದ್ಯಮಿಗಳನ್ನು ಜೆಡಿಎಸ್ ನಿಂದ ವಿಧಾನಪರಿಷತ್ ಕಳಿಸಲಾಗಿದೆ. ಇದುವರೆಗೂ ರೈತನನ್ನು, ಪಕ್ಷದ ನಿಷ್ಠಾವಂತ ಕಾರ್ಯಕರ್ತನನ್ನು ವಿಧಾನ ಪರಿಷತ್ ಗೆ ಜೆಡಿಎಸ್ ನಿಂದ ಕಳಿಸಲಿಲ್ಲಾ ಯಾಕೆ.? ಎಂದು ಖಾರವಾಗಿ ಪ್ರಶ್ನಿಸಿದರು.

ಕುಮಾರಸ್ವಾಮಿ ಎರಡನೇ ಬಾರಿ ಸಿಎಂ ಆದ ನಂತರ ಅನೇಕ ನಾಯಕರು ಪಕ್ಷ ತೊರೆದಿದ್ದಾರೆ. ಈ ಬಗ್ಗೆ ಒಂದು ಸಭೆ ನಡೆಸಿಲ್ಲ. ಹೋದವರೆಲ್ಲಾ ಹೋಗಲಿ ಪುಟ್ ಪಾತ್ ಅಂತಾರೆ. ಸಿದ್ದರಾಮಯ್ಯ, ದೇಶಪಾಂಡೆ, ಸೇರಿ ಅನೇಕರು ಪಕ್ಷ ಬಿಟ್ಟರು. ಅವರೆಲ್ಲಾ ಪುಟ್ ಪಾತ್ ಆಗಿದ್ದಾರಾ ? ನಂಜನಗೂಡು ದೇವಸ್ಥಾನದ ಮುಂದೆ ಭಿಕ್ಷಾ ಪಾತ್ರೆ ಹಿಡಿದಿದ್ದಾರಾ ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ವಾಭಿಮಾನ ಬಿಟ್ಟು ಗುಲಾಮನಾಗಿ ಕೆಲಸ ಮಾಡಲು ನಾನು ಸಿದ್ದನಿಲ್ಲ. ನಾನು ಬೇರೆ ಪಕ್ಷಕ್ಕೆ ಹೋಗಲು ಸಿದ್ದನಿಲ್ಲ. ಯಾವುದೇ ಪಕ್ಷದ ನಾಯಕರ ಸಂಪರ್ಕದಲ್ಲಿ ನಾನು ಇಲ್ಲ. ನಾನು ಪಕ್ಷ ಬಿಡುವುದು ಖಚಿತ. ನಾನು ಮುಂದೆ ಜೆಡಿಎಸ್ ಪಕ್ಷದಿಂದ ಯಾವುದೇ ಕಾರಣಕ್ಕೂ ಸ್ಪರ್ಧೆ ಮಾಡುವುದಿಲ್ಲ ಎಂದು ತಿಳಿಸಿದರು.

ನಾನು ಈ ಪದವೀಧರರ ಚುನಾವಣೆಯಲ್ಲಿ ತಟಸ್ಥವಾಗಿರುತ್ತೇನೆ. ಜೆಡಿಎಸ್ ಅಭ್ಯರ್ಥಿ ರಾಮು ಪರ ಮತ ಕೇಳುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.

ಹಿಂದಿನ ಲೇಖನಹಂಗಾಮಿ ಉಪಸಭಾಪತಿಯಾಗಿ ರಘುನಾಥ್‌ ಮಲಕಾಪುರೆ ನೇಮಕ
ಮುಂದಿನ ಲೇಖನಈ ದಶಕದ ಅಂತ್ಯಕ್ಕೆ 6ಜಿ ಸೇವೆ: ಪ್ರಧಾನಿ