ಮನೆ ಕಾನೂನು ಘನತ್ಯಾಜ್ಯ ಕುರಿತು ಕೂಡಲೇ ಪರಿಹಾರ: ಕೇಂದ್ರ, ಪಾಲಿಕೆಗಳು ಸಭೆ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶ

ಘನತ್ಯಾಜ್ಯ ಕುರಿತು ಕೂಡಲೇ ಪರಿಹಾರ: ಕೇಂದ್ರ, ಪಾಲಿಕೆಗಳು ಸಭೆ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶ

0

ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶದಲಿ (ಎನ್‌ಸಿಆರ್) ಸಂಸ್ಕರಿಸದ ಘನತ್ಯಾಜ್ಯದ ಮಟ್ಟ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಸೋಮವಾರ  ಆಘಾತ ವ್ಯಕ್ತಪಡಿಸಿದೆ.

Join Our Whatsapp Group

ರಾಷ್ಟ್ರ ರಾಜಧಾನಿಯಲ್ಲಿ ಘನತ್ಯಾಜ್ಯ ಹೆಚ್ಚಳ ಭಯಾನಕವಾಗಿದ್ದು ಅಧಿಕಾರಿಗಳು ಉದಾಸೀನತೆ ಮುಂದುವರೆಸಿದ್ದಾರೆ ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ತಿಳಿಸಿದೆ.

“ಇದು (ದೇಶದ) ರಾಜಧಾನಿ. ಈ ಪರಿಸ್ಥಿತಿ ಕುರಿತು ಏನು ಮಾಡುವಿರಿ ಎಂಬ ಸರಳ ಪ್ರಶ್ನೆಗೆ ಉತ್ತರಿಸಿ. ನಾವು ಪಾಲಿಕೆಯ ಅತ್ಯುನ್ನತ ಅಧಿಕಾರಿಯನ್ನು ಕರೆಸುತ್ತೇವೆ. ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಇದು ಇನ್ನಷ್ಟು ಹೆಚ್ಚಾಗದಂತೆ ನಿಭಾಯಿಸಲು ಕೇಂದ್ರ ಸರ್ಕಾರ ಸಭೆ ನಡೆಸಬೇಕು. ಅಮಿಕಸ್‌ ಅವರು ಭಯಾನಕ ಎಂಬ ಪದವನ್ನು ಸರಿಯಾಗಿಯೇ ಉಚ್ಚರಿಸಿದ್ದಾರೆ. ಎಲ್ಲೆಂದರಲ್ಲಿ (ಎನ್‌ಸಿಆರ್‌ನಲ್ಲಿ) ಘನತ್ಯಾಜ್ಯ ಇದೆ. ಇದನ್ನು ಕಡಿಮೆ ಮಾಡುವುದು ಹೇಗೆ ಎಂದು ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ” ಎಂದು ನ್ಯಾಯಾಲಯ ನುಡಿದಿದೆ.

ಘನತ್ಯಾಜ್ಯ ಸಮಸ್ಯೆ ಎಂಬುದು ಸ್ವಚ್ಛ ಪರಿಸರದಲ್ಲಿ ಬದುಕುವ ನಾಗರಿಕರ ಮೂಲಭೂತ ಹಕ್ಕಿನ ಮೇಲೆ ನೇರವಾಗಿ ಪರಿಣಾಮ ಬೀರುವ ಸಂಗತಿ ಎಂದು ಪೀಠ ಕಳವಳ ವ್ಯಕ್ತಪಡಿಸಿದೆ.

“ಮಾಲಿನ್ಯ ಮುಕ್ತ ಪರಿಸರದಲ್ಲಿ ವಾಸಿಸುವುದು ಸಂವಿಧಾನದ 21ನೇ ವಿಧಿಯಡಿ ಒದಗಿಸಲಾದ ಅಡಿಯಲ್ಲಿ ನಾಗರಿಕರ ಮೂಲಭೂತ ಹಕ್ಕುಗಳ ಮೇಲೆ ನೇರ ಪರಿಣಾಮ ಬೀರುತ್ತದೆ” ಎಂದು ಪೀಠ ಒತ್ತಿಹೇಳಿತು.

ಹೀಗಾಗಿ ತಕ್ಷಣ ಪರಿಹಾರ ರೂಪಿಸಬೇಕಿದೆ. ಆದರೆ ದೆಹಲಿ ನಗರ ಪಾಲಿಕೆ (ಎಂಸಿಡಿ) ಮತ್ತಿತರ ಪುರಸಭೆ ಸಂಸ್ಥೆಗಳು ಸಮಸ್ಯೆ  ನಿಭಾಯಿಸುವ ಸ್ಥಿತಿಯಲ್ಲಿಲ್ಲ. ಆದ್ದರಿಂದ, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಮತ್ತು ಎನ್‌ಸಿಆರ್‌ನ ಪುರಸಭೆ ಸಂಸ್ಥೆಗಳ ಸಭೆ ಕರೆಯುವಂತೆ ನಿರ್ದೇಶಿಸಿತು.

ಜುಲೈ 19 ರೊಳಗೆ ನಿಶ್ಚಿತ ಪರಿಹಾರ ಕಂಡುಕೊಳ್ಳಬೇಕು ಇಲ್ಲದೇ ಹೋದರೆ ಕಠಿಣ ಆದೇಶ ನೀಡಬೇಕಾಗುತ್ತದೆ ಎಂದು ನ್ಯಾಯಾಲಯ ಎಚ್ಚರಿಕೆ ನೀಡಿತು.

ಹಿಂದಿನ ಲೇಖನಹೆಚ್​ ಡಿ ರೇವಣ್ಣ ಜೈಲಿನಿಂದ ಬಿಡುಗಡೆ: ಅಭಿಮಾನಿಗಳನ್ನು ಚದುರಿಸಲು ಲಾಠಿಚಾರ್ಜ್
ಮುಂದಿನ ಲೇಖನಕಗ್ಗಲಿಪುರ ಈಡಿಫೈ ಶಾಲೆಗೆ ಬಾಂಬ್ ಬೆದರಿಕೆ