ಮನೆ ರಾಷ್ಟ್ರೀಯ ಆಮದು ಸುಂಕ ಕಾನೂನುಬಾಹಿರ – ಟ್ರಂಪ್‌ಗೆ ಕೋರ್ಟ್‌ನಿಂದಲೇ ಛೀಮಾರಿ..!

ಆಮದು ಸುಂಕ ಕಾನೂನುಬಾಹಿರ – ಟ್ರಂಪ್‌ಗೆ ಕೋರ್ಟ್‌ನಿಂದಲೇ ಛೀಮಾರಿ..!

0

ವಾಷಿಂಗ್ಟನ್ : ಆಮದು ಸುಂಕ ಕಾನೂನು ಬಾಹಿರ ಎಂದು ಯುಎಸ್‌ ಕೋರ್ಟ್‌ ಹೇಳಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಿರ್ಧಾರಕ್ಕೆ ಕೋರ್ಟ್‌ ಛೀಮಾರಿ ಹಾಕಿದ್ದು, ಟ್ರಂಪ್‌ ನಿರ್ಧಾರಕ್ಕೆ ವಾಷಿಂಗ್ಟನ್‌ನ ಫೆಡರಲ್ ಮೇಲ್ಮನವಿ ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿದೆ.

ಕೆಳ ನ್ಯಾಯಾಲಯದ ತೀರ್ಪನ್ನು ನ್ಯಾಯಾಲಯವು ಅನುಮೋದಿಸಿದ್ದು, ಟ್ರಂಪ್ ವಿಧಿಸಿರುವ ಹೆಚ್ಚಿನ ಆಮದು ಸುಂಕಗಳು ಕಾನೂನುಬಾಹಿರ ಎಂದು ಹೇಳಿದೆ. ಈ ಸಂದರ್ಭದಲ್ಲಿ ಈ ಅಧಿಕಾರವನ್ನು ಬಳಸಲು ಅಧ್ಯಕ್ಷರ ಅಧಿಕಾರವನ್ನು ನ್ಯಾಯಾಲಯವು ಪ್ರಶ್ನಿಸಿದೆ.

ಫೆಡರಲ್ ಮೇಲ್ಮನವಿ ನ್ಯಾಯಾಲಯವು ಅಮೆರಿಕ ಅಧ್ಯಕ್ಷರು ತುರ್ತು ಅಧಿಕಾರಗಳ ದುರುಪಯೋಗದ ಬಗ್ಗೆ ಮಾತನಾಡಿದೆ. 11 ನ್ಯಾಯಾಧೀಶರ ಪೀಠದಲ್ಲಿ, 7 ನ್ಯಾಯಾಧೀಶರು ಟ್ರಂಪ್ ಅವರ ಸುಂಕ ವಿಧಿಸುವ ನಿರ್ಧಾರವನ್ನು ಕಾನೂನುಬಾಹಿರವೆಂದು ಘೋಷಿಸಿದರೆ, 4 ನ್ಯಾಯಾಧೀಶರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಆದೇಶ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಶ್ವೇತ ಭವನ ನಿರ್ಧರಿಸಿದ್ದು, ಇತರೆ ದೇಶಗಳ ಮೇಲೆ ವಿಧಿಸಿರುವ ಎಲ್ಲಾ ಸುಂಕಗಳು ಜಾರಿಯಲ್ಲಿರುತ್ತವೆ. ಒಂದು ವೇಳೆ ಟ್ಯಾರಿಫ್‌ ತೆಗೆದುಹಾಕಿದರೆ, ದೇಶಕ್ಕೆ ಹಾನಿಕಾರಕ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪುನರುಚ್ಚರಿಸಿದ್ದಾರೆ.

‌ಟ್ರಂಪ್ ಅವರ ಹಲವು ಸುಂಕಗಳು ಕಾನೂನುಬಾಹಿರ ಎಂದು ಯುಎಸ್ ನ್ಯಾಯಾಲಯ ತೀರ್ಪು ನೀಡಿದ ಬೆನ್ನಲ್ಲೇ ಟ್ರಂಪ್‌ ಪ್ರತಿಕ್ರಿಯಿಸಿದ್ದಾರೆ. ಎಲ್ಲಾ ಸುಂಕಗಳು ಇನ್ನೂ ಜಾರಿಯಲ್ಲಿವೆ. ಇಂದು ಅತ್ಯಂತ ಪಕ್ಷಪಾತದ ಮೇಲ್ಮನವಿಗೆ ನ್ಯಾಯಾಲಯವು ನಮ್ಮ ಸುಂಕಗಳನ್ನು ತೆಗೆದುಹಾಕಬೇಕು ಎಂದು ತಪ್ಪಾಗಿ ಹೇಳಿದೆ. ಆದರೆ, ಕೊನೆಯಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ಗೆಲ್ಲುತ್ತದೆ ಎಂದು ಅವರಿಗೆ ತಿಳಿದಿದೆ.

ಈ ಸುಂಕಗಳು ಎಂದಾದರೂ ರದ್ದಾದರೆ, ಅದು ದೇಶಕ್ಕೆ ವಿಪತ್ತು. ಅದು ನಮ್ಮನ್ನು ಆರ್ಥಿಕವಾಗಿ ದುರ್ಬಲಗೊಳಿಸುತ್ತದೆ. ನಾವು ಬಲಿಪಶು ಆಗಬೇಕಾಗುತ್ತದೆ ಎಂದು ಟ್ರಂಪ್ ಟ್ರುತ್ ಸೋಶಿಯಲ್‌ನಲ್ಲಿ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಹಲವು ವರ್ಷಗಳಿಂದ ಕಾಳಜಿಯಿಲ್ಲದ ಮತ್ತು ಅವಿವೇಕದ ರಾಜಕಾರಣಿಗಳು ಸುಂಕಗಳನ್ನು ನಮ್ಮ ವಿರುದ್ಧವೇ ಬಳಸಲು ಅನುಮತಿಸಿದ್ದರು. ಈಗ ಯುನೈಟೆಡ್ ಸ್ಟೇಟ್ಸ್ ಸುಪ್ರೀಂ ಕೋರ್ಟ್ ಸಹಾಯದಿಂದ, ಅವುಗಳನ್ನು ನಮ್ಮ ರಾಷ್ಟ್ರದ ಪ್ರಯೋಜನಕ್ಕಾಗಿ ಬಳಸುತ್ತೇವೆ. ಅಮೆರಿಕವನ್ನು ಮತ್ತೆ ಶ್ರೀಮಂತ, ಬಲಿಷ್ಠ ಮತ್ತು ಶಕ್ತಿಶಾಲಿಯನ್ನಾಗಿ ಮಾಡುತ್ತೇವೆ ಎಂದು ಟ್ರಂಪ್‌ ಪ್ರತಿಜ್ಞೆ ಮಾಡಿದ್ದಾರೆ ಎನ್ನಲಾಗಿದೆ.