ಮೈಸೂರು: ಚಾಮುಂಡಿ ಬೆಟ್ಟಕ್ಕೆ ವೇಗ ಮಿತಿ ಅಳವಡಿಸುವುದು ಉತ್ತಮ ನಿರ್ಧಾರ. ಚಾಮುಂಡಿ ಬೆಟ್ಟಕ್ಕೆ ಸಂಪೂರ್ಣವಾಗಿ ಖಾಸಗಿ ವಾಹನ ನಿರ್ಬಂಧ ಮಾಡಿ ಎಂದು ಸರ್ಕಾರಕ್ಕೆ ಪಾರಂಪರಿಕ ತಜ್ಞ ಹಾಗೂ ಪರಿಸರವಾದಿ ಪ್ರೊ ರಂಗರಾಜು ಮನವಿ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಪ್ರೊ ರಂಗರಾಜು, ಚಾಮುಂಡಿ ಬೆಟ್ಟ ನೈಸರ್ಗಿಕ ಸಂಪನ್ಮೂಲಗಳ ಮೂಲ. ಇಲ್ಲಿ ಸಾಕಷ್ಟು ಪ್ರಾಣಿ ಸಂಕುಲ ಇದೆ. ಅವುಗಳ ರಕ್ಷಣೆ ತುಂಬಾ ಅಗತ್ಯ ಇದೆ. ಇದರ ಜೊತೆ ಚಾಮುಂಡಿ ಬೆಟ್ಟ ಇತರೆ ಬೆಟ್ಟಗಳ ರೀತಿ ಇಲ್ಲ. ಬೆಟ್ಟವು ಸಣ್ಣ ಕಲ್ಲು ಬಂಡೆ ಹಾಗೂ ಮೃದು ಮಣ್ಣಿನಿಂದ ನಿರ್ಮಾಣವಾಗಿದೆ. ಈ ಬೆಟ್ಟಕ್ಕೆ ಹೆಚ್ಚಿನ ಒತ್ತಡ ಸಹಿಸಿಕೊಳ್ಲುವ ಶಕ್ತಿ ಇಲ್ಲ. ಈಗಾಗಲೇ ಬೆಟ್ಟದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದೆ. ಹೀಗಾಗಿ ಬೆಟ್ಟಕ್ಕೆ ಹೆಚ್ಚಿನ ಒತ್ತಡ ಉಂಟಾಗಿದೆ. ಚಾಮುಂಡಿ ಬೆಟ್ಟವನ್ನ ಧಾರ್ಮಿಕ ಕ್ಷೇತ್ರವನ್ನಾಗಿ ಬಿಡಿ. ಅದು ವ್ಯಾವಹಾರಿಕ ಕೇಂದ್ರವಾಗುವುದು ಬೇಡ ಎಂದು ಹೇಳಿದರು.
ವಾಹನಗಳ ಹಾಗೂ ವಾಣಿಜ್ಯ ವ್ಯವಹಾರಗಳಿಂದ ಒತ್ತಡ ಹೆಚ್ಚಾಗಿದ್ದು, ಹೀಗಾಗಿ ಬೆಟ್ಟಕ್ಕೆ ಸಂಪೂರ್ಣವಾಗಿ ಖಾಸಗಿ ವಾಹನ ನಿರ್ಬಂಧ ಮಾಡಿ. ಹಿಮವದ್ ಗೋಪಾಲಸ್ವಾಮಿ ದೇವಾಲಯದ ರೀತಿ ಸರ್ಕಾರಿ ಬಸ್ ಗಳನ್ನು ಮಾತ್ರ ಬಿಡಿ. ಈ ಮೂಲಕ ಚಾಮುಂಡಿ ಬೆಟ್ಟದ ರಕ್ಷಣೆ ಮಾಡಿ ಎಂದು ಪ್ರೊ. ರಂಗರಾಜು ಮನವಿ ಮಾಡಿದರು.