ಮೈಸೂರು(Mysuru): ಚಾಮುಂಡಿಬೆಟ್ಟದಲ್ಲಿ ನಾಡಹಬ್ಬಕ್ಕೆ ಚಾಲನೆ ನೀಡುವ ಸಂದರ್ಭದಲ್ಲೇ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸುವುದು ಸಂಪ್ರದಾಯ. ಆದರೆ ಈ ಬಾರಿ ದಸರಾ ಕ್ರೀಡಾಕೂಟಕ್ಕೆ ಉದ್ಘಾಟನಾ ಭಾಗ್ಯವಿಲ್ಲ.
ಈ ಬಾರಿ ಕ್ರೀಡಾಕೂಟ ಉದ್ಘಾಟನೆಯನ್ನು ಸೆ.29ಕ್ಕೆ ಮುಂದೂಡಲಾಗಿದೆ. ಒಲಿಂಪಿಯನ್, ಕುಸ್ತಿಪಟು ಸಾಕ್ಷಿ ಮಲ್ಲಿಕ್ ಅವರನ್ನು ಕ್ರೀಡಾಕೂಟ ಉದ್ಘಾಟಿಸಲು ಆಹ್ವಾನಿಸಲಾಗಿದೆ.
ಕ್ರೀಡಾಕೂಟದ ಸ್ಥಳ, ಸ್ಪರ್ಧೆಗಳ ಪಟ್ಟಿಯೇ ಸಿದ್ಧಗೊಂಡಿಲ್ಲ. ಅನುದಾನ, ವಿಜೇತರ ಬಹುಮಾನದ ಮೊತ್ತವೂ ನಿಗದಿಯಾಗಿಲ್ಲ. ಕೊರೊನಾದಿಂದಾಗಿ ಕ್ಷೀಣವಾಗಿದ್ದ ಕ್ರೀಡಾ ಚಟುವಟಿಕೆಗಳಿಗೆ ಈ ಬಾರಿಯ ದಸರಾದಲ್ಲಿ ಹುರುಪು ಸಿಗಬಹುದು ಎಂಬ ಕ್ರೀಡಾಪಟುಗಳ ಕನಸು ನನಸಾಗಿಲ್ಲ.
ಈ ಹಿಂದಿನ ಕ್ರೀಡಾಕೂಟಗಳಲ್ಲಿ ಗೆದ್ದ ಕೆಲವರಿಗೆ ಇದುವರೆಗೂ ಬಹುಮಾನ ಸಿಕ್ಕಿಲ್ಲ. ಈ ಬಾರಿಯೂ ಟಿ ಶರ್ಟ್, ಭತ್ಯೆಗೆ ಪರದಾಡಬೇಕಾಗಬಹುದೆಂಬ ಆತಂಕವೂ ಕ್ರೀಡಾಪಟುಗಳಲ್ಲಿದೆ.
ನಾಡಹಬ್ಬಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಚಾಲನೆ ನೀಡಲಿರುವುದರಿಂದ ಭದ್ರತೆಯ ಸಲುವಾಗಿ ಹಾಗೂ ಅತಿಥಿಗಳ ದಿನಾಂಕದಲ್ಲಿ ವ್ಯತ್ಯಾಸವಾಗಿದ್ದರಿಂದ ಕ್ರೀಡಾಕೂಟವನ್ನು ಮುಂದೂಡಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೋಹಿತ್ ಮಾಹಿತಿ ನೀಡಿದ್ದಾರೆ.
ದಸರಾ ಕ್ರೀಡಾಕೂಟವನ್ನು 10 ದಿನವೂ ನಡೆಸಬೇಕು. ನಾಲ್ಕು ದಿನದ ತರಾತುರಿಯ ಆಯೋಜನೆಯೂ ಸರಿಯಲ್ಲ ಎಂದು ರಾಜ್ಯ ಸೈಕ್ಲಿಂಗ್ ಸಂಸ್ಥೆ ಅಧ್ಯಕ್ಷ ರಾಜು ಬಿರಾದಾರ್ ಬೇಸರ ವ್ಯಕ್ತಪಡಿಸಿದರು.