ಮೈಸೂರು: ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯನ್ನು ಸಾಕಾರಾತ್ಮಕವಾಗಿ ಪರಿಗಣಿಸುತ್ತೇವೆ. ಸರ್ವಿಸ್ ರೋಡ್ ನಿರ್ಮಾಣದ ಬಳಿಕವೇ ಹೈವೇ ಉದ್ಘಾಟನೆ ಆಗಲಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ಹೈವೇಗೆ ಸರ್ವಿಸ್ ರೋಡ್ ನಿರ್ಮಾಣ ಮಾಡಲಿ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ದ್ವಿಚಕ್ರವಹನ, ಸಣ್ಣಪುಟ್ಟ ವಾಹನಗಳಿಗೆ ಸರ್ವಿಸ್ ರೋಡ್ ಇರಲಿದೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಚಾಮರಾಜನಗರ- ನಂಜನಗೂಡು ಚತುಷ್ಟಥ ರಸ್ತೆಗೆ ಯಾಕೆ ಸರ್ವಿಸ್ ರೋಡ್ ಬಿಟ್ಟಿಲ್ಲ.? ಅಂದು ಬಡವರು ಡಿಕೆಶಿ ಕಣ್ಣಿಗೆ ಕಾಣಲಿಲ್ಲವಾ.? ಎಂದು ಇದೇ ಸಂದರ್ಭದಲ್ಲಿ ತಿರುಗೇಟು ನೀಡಿದರು.
ಡಿಕೆಶಿ ಮೊದಲು ನೆನೆಗುದಿಗೆ ಬಿದ್ದಿರುವ ಮಳವಳ್ಳಿ ಬೆಂಗಳೂರು ಮಾರ್ಗ ಸರಿಪಡಿಸಲಿ. ಹಾಸನ ಬೆಂಗಳೂರು ರಸ್ತೆ ನಿರ್ಮಾಣ ಮಾಡಿದಾಗಲು ಸರ್ವಿಸ್ ರೋಡ್ ಮಾಡಿರಲಿಲ್ಲ. ಅಂದು ಯಾಕೆ ಡಿಕೆಶಿಗೆ ಬಡವರ ಪರ ಕಾಳಜಿ ಇರಲಿಲ್ಲ ಎಂದು ಪ್ರಶ್ನಿಸಿದರು.
ಪ್ಯಾರಿಸ್ ಮೀರಿಸುವ ರಸ್ತೆ ನಿರ್ಮಾಣವಾಗಿದೆ
ಪ್ಯಾರಿಸ್ ಮಾದರಿಯಲ್ಲಿ ಒಂದೇ ಒಂದು ರಸ್ತೆ ನಿರ್ಮಾಣ ಮಾಡಲಿ ಎಂಬ ಡಿಕೆಶಿ ಹೇಳಿಕೆ ಬಗ್ಗೆ ಮಾತನಾಡಿ, ಕಾಂಗ್ರೆಸ್ ನವರು ಪ್ರಜಾಧ್ವನಿ ಯಾತ್ರೆ ಮಾಡುತ್ತಿದ್ದಾರೆ. ಡಿಕೆಶಿಗೆ ಒಮ್ಮೆ ಹೈವೇನಲ್ಲಿ ಬಂದು ಹೋಗಿ ಎಂದು ಹೇಳಿ. ರಸ್ತೆಯಲ್ಲಿ ಬರುವಾಗ ನೋಡಲು ಹೇಳಿ. ಪ್ಯಾರಿಸ್ ಮಾದರಿ ರಸ್ತೆಯನ್ನು ಮೀರಿಸುವ ರಸ್ತೆ ನಿರ್ಮಾಣವಾಗಿದೆ ಎಂದು ಟಾಂಗ್ ನೀಡಿದರು.
ಮೈಸೂರಿಗೂ ಈ ಬಾರಿಯ ಬಜೆಟ್ ಹಲವು ಯೋಜನೆ ನೀಡಿದೆ. ಮೋದಿ ಸರ್ಕಾರ ಯಾವುದೇ ಯೋಜನೆಗೆ ಬಜೆಟ್ ಕಾಗಿ ಕಾದು ಕುಳಿತುಕೊಳ್ಳುವುದಿಲ್ಲ. ಬೇಕೆಂದಾಗ ಯೋಜನೆಗಳನ್ನು ಘೋಷಣೆ ಮಾಡುತ್ತಿದೆ ಎಂದರು.
ಬೊಮ್ಮಾಯಿ ಸರ್ಕಾರ ಎಸ್ಸಿ ಎಸ್ಟಿ ಜನಾಂಗಕ್ಕೆ ಮೀಸಲಾತಿ ಹೆಚ್ಚಳ ಮಾಡುವ ಕೆಲಸ ಮಾಡಿದೆ. ಈ ಮೂಲಕ ಆ ಸಮುದಾಯಕ್ಕೆ ಉಪಯೋಗವಾಗುತ್ತಿದೆ. ಹತ್ತು ಲಕ್ಷ ರೈತರ ಮಕ್ಕಳಿಗೆ ಸ್ಕಾಲರ್ ಶಿಪ್ ಕೊಡುತ್ತಿದ್ದಾರೆ ಎಂದು ತಿಳಿಸಿದರು.