ಮನೆ ರಾಜಕೀಯ ಎಸ್.ಸಿ – ಎಸ್.ಟಿ ಮೀಸಲಾತಿ ಹೆಚ್ಚಳ: ನ್ಯಾ.ಹೆಚ್.ಎನ್.ನಾಗಮೋಹನ್ ದಾಸ್ ಆಯೋಗದ ವರದಿ ಯಥಾವತ್ತಾಗಿ ಒಪ್ಪಿಕೊಳ್ಳಲು ನಿರ್ಧಾರ

ಎಸ್.ಸಿ – ಎಸ್.ಟಿ ಮೀಸಲಾತಿ ಹೆಚ್ಚಳ: ನ್ಯಾ.ಹೆಚ್.ಎನ್.ನಾಗಮೋಹನ್ ದಾಸ್ ಆಯೋಗದ ವರದಿ ಯಥಾವತ್ತಾಗಿ ಒಪ್ಪಿಕೊಳ್ಳಲು ನಿರ್ಧಾರ

0

ಬೆಂಗಳೂರು(Bengaluru): ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್  ದಾಸ್ ಆಯೋಗ ನೀಡಿರುವ ವರದಿಯನ್ನು ಯಥಾವತ್ತಾಗಿ ಒಪ್ಪಿಕೊಳ್ಳಲು ಸಂಪುಟ ಸಭೆ ನಿರ್ಧರಿಸಿದೆ.

ಸಂಪುಟ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಜೆ.ಸಿ.‌ಮಾಧುಸ್ವಾಮಿ, ಪರಿಶಿಷ್ಟ ಜಾತಿ (ಎಸ್.ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್.ಟಿ) ಮೀಸಲಾತಿ ಪ್ರಮಾಣವನ್ನು ಒಟ್ಟು ಶೇಕಡ 6ರಷ್ಟು ಹೆಚ್ಚಳದ ತೀರ್ಮಾನವನ್ನು ಸರ್ಕಾರಿ ಆದೇಶದ ಮೂಲಕ ಅನುಷ್ಠಾನಕ್ಕೆ ತರಲು ಶನಿವಾರ ನಡೆದ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ‌.

ಎಸ್.ಸಿ ಮೀಸಲಾತಿಯನ್ನು ಶೇಕಡ 15ರಿಂದ ಶೇ 17ಕ್ಕೆ ಮತ್ತು ಎಸ್.ಟಿ ಮೀಸಲಾತಿಯನ್ನು ಶೇ 3ರಿಂದ 7ಕ್ಕೆ ಹೆಚ್ಚಿಸಲಾಗುವುದು ಎಂದರು.

ಮೀಸಲಾತಿ ಹೆಚ್ಚಳ, ಯಾವ ಸಮುದಾಯಗಳ ಮೀಸಲಾತಿ ಕಡಿತವಾಗಲಿದೆ, ಅನುಷ್ಠಾನದ ಮಾದರಿ ಕುರಿತಂತೆ ಆದೇಶದಲ್ಲೇ ವಿವರಣೆ ನೀಡಲಾಗುವುದು. ಎರಡರಿಂದ ಮೂರು ದಿನಗಳಲ್ಲಿ ಆದೇಶ ಪ್ರಕಟವಾಗಲಿದೆ ಎಂದು ತಿಳಿಸಿದರು.

ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯ ಶಿಫಾರಸಿನಂತೆ ಎಸ್.ಸಿ ಹಾಗೂ ಎಸ್.ಟಿ ಸಮುದಾಯಗಳಲ್ಲಿ ಒಳ‌ ಮೀಸಲಾತಿ ಕಲ್ಪಿಸುವ ಕುರಿತೂ ಚರ್ಚಿಸಲಾಗಿದೆ. ಈ ಸಂಬಂಧ ಸದಾಶಿವ ಆಯೋಗದ ವರದಿಯನ್ನು ಅಧ್ಯಯನ ಮಾಡಿ, ಪ್ರಸ್ತಾವವೊಂದನ್ನು ಸಿದ್ಧಪಡಿಸುವ ಜವಾಬ್ದಾರಿಯನ್ನು ತಮಗೆ ಮತ್ತು ಕಾನೂನು ಇಲಾಖೆಗೆ ವಹಿಸುವ ನಿರ್ಣಯವನ್ನೂ ಸಂಪುಟ ಕೈಗೊಂಡಿದೆ ಎಂದರು.

ಎಸ್.ಸಿ ಮತ್ತು ಎಸ್.ಟಿ ಮೀಸಲಾತಿ ಹೆಚ್ಚಳಕ್ಕೆ ಆದೇಶ ಹೊರಡಿಸಿ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಸೌಲಭ್ಯ ವಿಸ್ತರಿಸಲಾಗುವುದು. ಈಗಲೇ ಕಾನೂನು ರಚನೆಯ ಪ್ರಶ್ನೆ ಉದ್ಭವಿಸಿಲ್ಲ‌. ಇತರ ಸಮುದಾಯಗಳ ಮೀಸಲಾತಿ ಬೇಡಿಕೆಗಳನ್ನೂ ಇತ್ಯರ್ಥಪಡಿಸಿದ ಬಳಿಕ ಸಂವಿಧಾನ ತಿದ್ದುಪಡಿ ಕುರಿತು ತೀರ್ಮಾನಕ್ಕೆ ಬರಲಾಗುವುದು ಎಂದು ಮಾಧುಸ್ವಾಮಿ ಹೇಳಿದರು.

‌ವೈಜ್ಞಾನಿಕ ಅಧ್ಯಯನ ಮತ್ತು ಶಿಫಾರಸು ಇಲ್ಲದೆ ಮೀಸಲಾತಿ ಬದಲಾವಣೆ ಅಸಾಧ್ಯ. ಎಸ್.ಸಿ, ಎಸ್.ಟಿ ಮೀಸಲಾತಿ ಹೆಚ್ಚಳಕ್ಕೆ ಪೂರಕವಾದ ವರದಿಗಳಿವೆ. ಈ ಸಮುದಾಯಗಳಿಗೆ ನ್ಯಾಯ ಒದಗಿಸುವ ದೃಷ್ಟಿಯಿಂದ ತೀರ್ಮಾನ ಮಾಡಲಾಗಿದೆ. ಇತರ ಸಮುದಾಯಗಳ ಬೇಡಿಕೆ ಕುರಿತು ಅಧ್ಯಯನ ವರದಿ ಬಂದ ಬಳಿಕ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದರು.