ಮನೆ ಅಪರಾಧ ಮಹಿಳೆಯರು, ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚಳ: ಒಂದೇ ವರ್ಷದಲ್ಲಿ 153 ಅತ್ಯಾಚಾರ ಪ್ರಕರಣ ದಾಖಲು

ಮಹಿಳೆಯರು, ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚಳ: ಒಂದೇ ವರ್ಷದಲ್ಲಿ 153 ಅತ್ಯಾಚಾರ ಪ್ರಕರಣ ದಾಖಲು

0

ಬೆಂಗಳೂರು(Bengaluru): ಮೂರು ವರ್ಷಕ್ಕೆ ಹೋಲಿಸಿದರೆ, 2022ನೇ ಸಾಲಿನಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ಪ್ರಕರಣಗಳಾದ ವರದಕ್ಷಿಣೆ ಕಾಯ್ದೆ, ಪೋಕ್ಸೊ, ದೌರ್ಜನ್ಯ ಸೇರಿದಂತೆ ಇತರೆ ಪ್ರಕರಣಗಳು ಶೇ 30ರಷ್ಟು ಏರಿಕೆಯಾಗಿವೆ ಎಂದು ನಗರ ಪೊಲೀಸ್‌ ಕಮಿಷನರ್‌ ಪ್ರತಾಪ್‌ ರೆಡ್ಡಿ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,  ಮಹಿಳೆಯರು ಹಾಗೂ ಯುವತಿಯರಲ್ಲಿ ಹೆಚ್ಚು ಜಾಗೃತಿ ಮೂಡಿದ್ದು, ದೌರ್ಜನ್ಯಕ್ಕೆ ಒಳಗಾದವರು ಪ್ರಕರಣ ದಾಖಲಿಸುತ್ತಿದ್ದಾರೆ. ಒಂದೇ ವರ್ಷದಲ್ಲಿ 253 ಅತ್ಯಾಚಾರ ಪ್ರಕರಣ ದಾಖಲಾಗಿದೆ ಎಂದರು.

2022ರಲ್ಲಿ ಒಟ್ಟು 9281 ಪ್ರಕರಣಗಳು ದಾಖಲಾಗಿದ್ದು, 2728 ಪ್ರಕರಣಗಳನ್ನು ಭೇದಿಸಲಾಗಿದೆ. ಕೊಲೆ, ಸುಲಿಗೆ, ಡಕಾಯಿತಿ, ಸರ ಅಪಹರಣ, ಮನೆಯಲ್ಲಿದ್ದ ಚಿನ್ನಾಭರಣ ಕಳವು, ವಾಹನ ಕಳವು ಪ್ರಕರಣಗಳು ಇಳಿಕೆ ಕಂಡಿದೆ ಎಂದು ತಿಳಿಸಿದ್ದಾರೆ.

2019ರಲ್ಲಿ ಬೆಂಗಳೂರಿನಲ್ಲಿ 9962 ಪ್ರಕರಣಗಳು ದಾಖಲಾಗಿದ್ದು 4123 ಪ್ರಕರಣಗಳನ್ನು ಪೊಲೀಸ್ ಸಿಬ್ಬಂದಿವರ್ಗ ಭೇದಿಸಿದ್ದರು. 2020ರಲ್ಲಿ 6980 ಪ್ರಕರಣಗಳು ದಾಖಲಾಗಿದ್ದವು. 3149 ಪ್ರಕರಣಗಳನ್ನು ಪೊಲೀಸರು ಪತ್ತೆ ಹಚ್ಚಿದ್ದರು. 2021ರಲ್ಲಿ 7574 ಪ್ರಕರಣಗಳು ದಾಖಲಾಗಿದ್ದು, 3580 ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದರು. 2022ರಲ್ಲಿ 9281 ಪ್ರಕರಣಗಳು ದಾಖಲಾಗಿದ್ದು ಆ ಪೈಕಿ 2728 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. 2020 – 21ನೇ ಸಾಲಿನಲ್ಲಿ ಕೋವಿಡ್ 19 ಕಾರಣದಿಂದ ಲಾಕ್ ಡೌನ್, ರಾತ್ರಿ ಸಂಚಾರ ನಿಷೇಧ ಇರುವದರಿಂದ ಪ್ರಕರಣಗಳ ಸಂಖ್ಯೆ ಕಡಿಮೆ ವರದಿಯಾಗಿದೆ. ಕಳೆದ ಮೂರು ವರ್ಷಗಳಲ್ಲಿ ಗಮನಿಸಿದಾಗ ಕಳೆದ ವರ್ಷ ದಾಖಲಾದ ಪ್ರಕರಣಗಳ ಸಂಖ್ಯೆಗಳಲ್ಲಿ ಇಳಿಮುಖವಾಗಿದೆ. 2020ರಲ್ಲಿ 31 ಪ್ರಕರಣ, 2021ರಲ್ಲಿ 36 ಡಕಾಯಿತಿ ಪ್ರಕರಣಗಳು ದಾಖಲಾದರೆ 2022ರಲ್ಲಿ 23 ಪ್ರಕರಣಗಳು ದಾಖಲಾಗಿವೆ‌.

2020ರಲ್ಲಿ 152 ಹಾಗೂ 2021ರಲ್ಲಿ 166 ಸರಗಳ್ಳತನ ಪ್ರಕರಣದ ದೂರು ದಾಖಲಾಗಿದ್ದರೆ, 2022ರಲ್ಲಿ 151 ಪ್ರಕರಣ ದಾಖಲಾಗಿವೆ. ಅದೇ ರೀತಿ 2020ರಲ್ಲಿ 177 ಕೊಲೆ ಪ್ರಕರಣ ದಾಖಲಾದರೆ 2021ರಲ್ಲಿ 154 ಕೊಲೆ ಪ್ರಕರಣಗಳು ದಾಖಲಾಗಿವೆ. 2022ರಲ್ಲಿ 172 ಕೊಲೆ ಪ್ರಕರಣ ದಾಖಲಾಗಿವೆ. 2022ರಲ್ಲಿ ನಗರದಲ್ಲಿ 579 ಮಾದಕ ಪದಾರ್ಥ ಸರಬರಾಜುಗಾರರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದ್ದು 3448 ವ್ಯಸನಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇದೇ ಮೊದಲ ಬಾರಿಗೆ ಇಬ್ಬರು ಮಾದಕ ವಸ್ತು ಸರಬರಾಜುಗಾರರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕ್ರಮ ಜರುಗಿಸಲಾಗಿದೆ ತಿಳಿಸಿದರು.

ಕಳೆದ ವರ್ಷ ಹಿಜಾಬ್‌ ಸಂಬಂಧದ ಗಲಾಟೆ, ಕಾರ್ಮಿಕ, ರೈತರ ಹಾಗೂ ಸಂಘ ಸಂಸ್ಥೆಗಳಿಂದ ನಗರದಲ್ಲಿ ಒಟ್ಟು 500 ಪ್ರತಿಭಟನೆಗಳು ನಡೆದಿವೆ. ಎಲ್ಲಿಯೂ ಅಹಿತಕರ ಘಟನೆ ನಡೆದಿಲ್ಲ ಎಂದು ತಿಳಿಸಿದರು.

2022ರಲ್ಲಿ 8773 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದ್ದು ಆ ಪೈಕಿ 7734 ಪ್ರಕರಣಗಳನ್ನು ಪೂರ್ಣಗೊಳಿಸಿ 13.06 ಕೋಟಿ ಹಣವನ್ನು ವಂಚಕರ ಕೈ ಸೇರದಂತೆ ತಡೆಹಿಡಿಯಲಾಗಿದೆ. ಅನಧಿಕೃತವಾಗಿ ನೆಲೆಸಿದ್ದ 600 ವಿದೇಶಿಗರ ಪೈಕಿ 34 ಜನರನ್ನು ಪತ್ತೆಹಚ್ಚಿ ಅವರವರ ದೇಶಕ್ಕೆ ಕಳಿಸಲಾಗಿದೆ. 50 ವಿದೇಶಿ ಜನರನ್ನು ಬಂಧನ ಕೇಂದ್ರದಲ್ಲಿ ಇರಿಸಲಾಗಿದ್ದು ಶೀಘ್ರದಲ್ಲೇ ವಾಪಸ್​ ಕಳಿಸಲಾಗುವುದು ಎಂದು ಮಾಹಿತಿ ನೀಡಿದರು.