ನವದೆಹಲಿ (New Delhi)- ದೇಶಾದ್ಯಂತ ಬಿಸಿಲಿನ ತಾಪ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವೈದ್ಯಕೀಯವಾಗಿ ಸನ್ನದ್ಧ ಸ್ಥಿತಿಯಲ್ಲಿ ಇರುವಂತೆ ಕೇಂದ್ರ ಸರ್ಕಾರವು ರಾಜ್ಯಗಳಿಗೆ ನಿರ್ದೇಶನ ನೀಡಿದೆ.
ಬಿಸಿಗಾಳಿಯಿಂದ ಉತ್ತರದ ರಾಜ್ಯಗಳು ತತ್ತರಗೊಂಡಿವೆ. ಉಷ್ಣಾಂಶ ಹೆಚ್ಚಳದಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಉಂಟಾಗಬಹುದು. ಅಂಥವರು ಆಸ್ಪತ್ರೆಗೆ ಬಂದರೆ ತಕ್ಷಣವೇ ಅಗತ್ಯ ಚಿಕಿತ್ಸೆ ನೀಡಬೇಕು. ಈಗಿನಿಂದಲೇ ಪೂರಕ ಔಷಧಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುವುದು ಉಚಿತ. ತಂಪು ನೀಡುವ ಸಾಧನಗಳು ಸುಸ್ಥಿತಿಯಲ್ಲಿ ಇರಲಿ. ಕುಡಿಯುವ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಿ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಪತ್ರ ಬರೆದು ರಾಜ್ಯಗಳನ್ನು ಎಚ್ಚರಿಸಿದ್ದಾರೆ.
ದಿಲ್ಲಿ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಬಿಸಿಗಾಳಿ ಮತ್ತು ಬಿರು ಬಿಸಿಲು ಮುಂದುವರಿದಿದೆ. ಸೋಮವಾರದಿಂದ ಪರಿಸ್ಥಿತಿ ಕೊಂಚ ಸುಧಾರಿಸಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
3 ದಿನ ಮಳೆ
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಹಾಗೂ ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ, ಕೊಪ್ಪಳ ಹಾಗೂ ಯಾದಗಿರಿಯಲ್ಲಿ ಮಳೆಯಾಗಲಿದೆ. ಮೇ 2 ರಿಂದ 4ರವರೆಗೆ ಮಳೆಯಾಗಲಿದೆ. ಮೇ 2ರಂದು ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಮಳೆಯಾಗಲಿದ್ದು, ಮೇ 3 ಮತ್ತು 4ರಂದು ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಮಾತ್ರ ಮಳೆಯಾಗಲಿದೆ.