ಮನೆ ರಾಜ್ಯ ಮೈಸೂರಿನಲ್ಲಿ ದೇಶದಲ್ಲೇ ಮೊಟ್ಟ ಮೊದಲ ಸೆಮಿಕಂಡಕ್ಟರ್‌ ಘಟಕ ನಿರ್ಮಾಣ

ಮೈಸೂರಿನಲ್ಲಿ ದೇಶದಲ್ಲೇ ಮೊಟ್ಟ ಮೊದಲ ಸೆಮಿಕಂಡಕ್ಟರ್‌ ಘಟಕ ನಿರ್ಮಾಣ

0

ಬೆಂಗಳೂರು (Bengaluru)-ದೇಶದಲ್ಲೇ ಮೊಟ್ಟ ಮೊದಲ ಸೆಮಿಕಂಡಕ್ಟರ್‌ ಘಟಕ ಮೈಸೂರಿನಲ್ಲಿ ಸ್ಥಾಪನೆಯಾಗಲಿದೆ. 22,900 ಕೋಟಿ ರೂ. (3 ಬಿಲಿಯನ್‌ ಡಾಲರ್‌) ಹೂಡಿಕೆ ಮೊತ್ತದ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ.

ಈ ಯೋಜನೆಯ ಜಾರಿಯಿಂದಾಗಿ 1,500 ಉದ್ಯೋಗಾವಕಾಶ ಸೃಷ್ಟಿಯಾಗಲಿದೆ. ಇದಕ್ಕಾಗಿ ರಾಜ್ಯ ಸರ್ಕಾರ, ಐಎಸ್‌ಎಂಸಿ ಅನಲಾಗ್‌ ಫ್ಯಾಬ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಭಾನುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಸಮ್ಮುಖದಲ್ಲಿ ರಾಜ್ಯ ಸರಕಾರದ ಪರವಾಗಿ ಕೈಗಾರಿಕೆ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣ ರೆಡ್ಡಿ ಹಾಗೂ ಐಎಸ್‌ಎಂಸಿ ಅನಲಾಗ್‌ ಫ್ಯಾಬ್‌ ಪ್ರೈವೇಟ್‌ ಲಿಮಿಟೆಡ್‌ ಪರವಾಗಿ ನಿರ್ದೇಶಕ ಅಜಯ್‌ ಜಲನ್‌ ಒಪ್ಪಂದಕ್ಕೆ ಸಹಿ ಹಾಕಿದರು.

ಬಳಿಕ ಮಾತನಾಡಿದ ಬೊಮ್ಮಾಯಿ ಅವರು, ‘ಸೆಮಿ ಕಂಡಕ್ಟರ್‌ ಘಟಕ ನಿರ್ಮಾಣ ಸಂಬಂಧ ರಾಜ್ಯ ಸರ್ಕಾರ ಹಾಗೂ ಐಎಸ್‌ಎಂಸಿ ಅನಲಾಗ್‌ ಫ್ಯಾಬ್‌ ಪ್ರೈವೇಟ್‌ ಲಿ. ಸಂಸ್ಥೆ ನಡುವಿನ ಒಪ್ಪಂದವು ವಿಶ್ವದ ಸೆಮಿಕಂಡಕ್ಟರ್‌ ಕ್ಷೇತ್ರದ ನಕ್ಷೆಯಲ್ಲಿ ಕರ್ನಾಟಕವನ್ನು ಗುರುತಿಸುವಂತೆ ಮಾಡಲಿದೆ. ನಾನಾ ರಾಜ್ಯಗಳು ಸೆಮಿಕಂಡಕ್ಟರ್‌ ವಲಯಕ್ಕೆ ಹೂಡಿಕೆ ಆಕರ್ಷಿಸಲು ಕಸರತ್ತು ನಡೆಸಿವೆ. ಈ ಹೊತ್ತಿನಲ್ಲೇ ಈ ಮಹತ್ವದ ಒಪ್ಪಂದಕ್ಕೆ ರಾಜ್ಯ ಸರ್ಕಾರ ಸಹಿ ಹಾಕಿದೆ. ಇದು ನಾಡಿಗೆ ಹೆಮ್ಮೆಯ ಸಂಗತಿ ಎಂದರು.

ಕೇವಲ ಆರ್ಥಿಕ ಪ್ರೋತ್ಸಾಹಕಗಳು ಮಾತ್ರವಲ್ಲದೆ, ಒಟ್ಟಾರೆ ಕಾರ್ಯನಿರ್ವಹಣೆಗೆ ಅಗತ್ಯವಿರುವ ವಾತಾವರಣ ನಿರ್ಮಿಸುವುದೂ ಮುಖ್ಯ ಎನ್ನುವುದನ್ನು ಸರ್ಕಾರ ಅರಿತಿದೆ. ದೇಶದಲ್ಲಿಯೇ ಅತ್ಯುತ್ತಮ ಮೂಲಸೌಕರ್ಯ ಹಾಗೂ ಕೌಶಲಯುತ ಮಾನವ ಸಂಪನ್ಮೂಲ ರಾಜ್ಯದಲ್ಲಿದೆ. ಸೆಮಿಕಂಡಕ್ಟರ್‌ ಕ್ಷೇತ್ರದಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ. ಈ ನಿಟ್ಟಿನಲ್ಲಿ ಸವಾಲುಗಳು ಸಾಕಷ್ಟಿವೆ. ಈ ಸವಾಲುಗಳನ್ನು ಮೆಟ್ಟಿಲುಗಳನ್ನಾಗಿ ಪರಿವರ್ತಿಸಿಕೊಳ್ಳಲು ಒಪ್ಪಂದ ಅವಕಾಶ ಕಲ್ಪಿಸಿದೆ ಎಂದು ಬೊಮ್ಮಾಯಿ ಹೇಳಿದರು.

ಪ್ರಧಾನಿ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು ‘ಸೆಮಿ ಕಂಡಕ್ಟರ್‌ ಮಿಷನ್‌’ಗೆ ಅನುಮೋದನೆ ನೀಡಿರುವುದರಿಂದ ಈ ವಲಯದಲ್ಲಿ ರಾಜ್ಯ ಮುಂದುವರಿಯಲು ಸಾಧ್ಯವಾಗಿದೆ. ಈ ಒಡಂಬಡಿಕೆ ಇಸ್ರೇಲ್‌ ಹಾಗೂ ಭಾರತದ ನಡುವೆ ತಂತ್ರಜ್ಞಾನ, ಸಂಸ್ಕೃತಿಗಳ ವಿನಿಮಯಕ್ಕೂ ವೇದಿಕೆ ಕಲ್ಪಿಸಲಿದೆ ಎಂದು ಬೊಮ್ಮಾಯಿ ತಿಳಿಸಿದರು.

ಹಿಂದಿನ ಲೇಖನಕಾಸರಗೋಡು: ಕಲುಷಿತ ಆಹಾರ ಸೇವಿಸಿ ಓರ್ವ ಬಾಲಕಿ ಸಾವು; 18 ಮಂದಿ ಅಸ್ವಸ್ಥ
ಮುಂದಿನ ಲೇಖನಹೆಚ್ಚಿದ ಬಿಸಿ ಗಾಳಿ: ವೈದ್ಯಕೀಯವಾಗಿ ಸನ್ನದ್ಧವಾಗಿರುವಂತೆ ಕೇಂದ್ರ ಆರೋಗ್ಯ ಇಲಾಖೆ ಸೂಚನೆ