ಛತ್ತೋಗ್ರಾಮ್: ಮೊಹಮ್ಮದ್ ಸಿರಾಜ್ ಹಾಗೂ ಕುಲದೀಪ್ ಯಾದವ್ ನಿಖರ ಬೌಲಿಂಗ್ ನೆರವಿನಿಂದ ಆತಿಥೇಯ ಬಾಂಗ್ಲಾದೇಶ ವಿರುದ್ಧ ಇಲ್ಲಿ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಭಾರತ ಮೇಲುಗೈ ಸಾಧಿಸಿದೆ.
ಇಲ್ಲಿನ ಝಹೂರ್ ಅಹ್ಮದ್ ಚೌಧುರಿ ಕ್ರೀಡಾಂಗಣದ ಪಿಚ್ ಮೊದಲ ದಿನವೇ ಸ್ಪಿನ್ನರ್’ಗಳಿಗೆ ನೆರವಾಗುತ್ತಿದ್ದ ಕಾರಣ ಇಲ್ಲಿ ಬ್ಯಾಟ್ ಮಾಡುವುದು ಬಹಳ ಸವಾಲಿನ ಸಂಗತಿ ಆಗಿತ್ತು. ಇದಕ್ಕೆ ತಕ್ಕ ಆಟವಾಡಿದ ಭಾರತ ತಂಡ 404 ರನ್ ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಪಂದ್ಯದ ಮೊದಲ ದಿನ ಭಾರತ 6 ವಿಕೆಟ್’ಗೆ 278 ರನ್ ಗಳಿಸಿದ್ದಾಗ ಅಜೇಯ 82 ರನ್’ಗಳೊಂದಿಗೆ ಕ್ರೀಸ್ ಕಾಯ್ದುಕೊಂಡಿದ್ದ ಸ್ಟಾರ್ ಬ್ಯಾಟ್ಸ್’ಮನ್ ಶ್ರೇಯಸ್ ಅಯ್ಯರ್, ಎರಡನೇ ದಿನ ತಮ್ಮ ಖಾತೆಗೆ ಕೇವಲ 4 ರನ್ ಮಾತ್ರವೇ ಜೋಡಿಸಿ ಪೆವಿಲಿಯನ್ ಸೇರಿದರು.
ಆದರೆ, 8ನೇ ವಿಕೆಟ್’ಗೆ ಜೊತೆಯಾದ ಆರ್. ಅಶ್ವಿನ್ (58) ಮತ್ತು ಕುಲದೀಪ್ ಯಾದವ್ (40) 200 ಎಸೆತಗಳಲ್ಲಿ 87 ರನ್’ಗಳ ಜೊತೆಯಾಟವಾಡಿ ತಂಡದ ಉತ್ತಮ ಮೊತ್ತಕ್ಕೆ ಕಾರಣರಾದರು.
ಅವರ ಈ ಸ್ಪೋಟಕ ಇನಿಂಗ್ಸ್’ನಲ್ಲಿ 2 ದೈತ್ಯ ಸಿಕ್ಸರ್’ಗಳು ಹೊರಹೊಮ್ಮಿದವು. ಅದರಲ್ಲೂ ತಾವು ಕ್ರೀಸ್’ಗೆ ಬಂದು ಎದುರಿಸಿದ ಎರಡನೇ ಎಸೆತದಲ್ಲೇ ಆಫ್ ಸ್ಪಿನ್ನರ್ ಮೆಹ್ದಿ ಹಸನ್ ಮಿರಾಜ್ ಎದುರು ಮಿಡ್ ವಿಕೆಟ್ ಕಡೆಗೆ ಸ್ಲಾಗ್ ಸ್ವೀಪ್ ಮೂಲಕ 100 ಮೀ. ದೂರಕ್ಕೆ ಚೆಂಡನ್ನು ಸಿಕ್ಸರ್ ಬಾರಿಸಿ ಬಾಂಗ್ಲಾ ಆಟಗಾರರು ಬೆರಗಾಗುವಂತೆ ಮಾಡಿದರು. ಇದರ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರಿ ವೈರಲ್ ಆಗಿದ್ದು, ಉಮೇಶ್ ಸಾಮರ್ಥ್ಯಕ್ಕೆ ಕ್ರಿಕೆಟ್ ಪ್ರಿಯರು ಸಲಾಮ್ ಹೊಡೆದಿದ್ದಾರೆ.
ಬಾಂಗ್ಲಾದೇಶ ಪರ ಆಫ್ ಸ್ಪಿನ್ನರ್ ಮೆಹ್ದಿ ಹಸನ್ 112 ರನ್ ಹೊಡೆಸಿಕೊಂಡರೂ 4 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು. ಎಡಗೈ ಸ್ಪಿನ್ನರ್ ತೈಜುಲ್ ಇಸ್ಲಾಮ್ 113ಕ್ಕೆ 4 ವಿಕೆಟ್ ಸಂಪಾದಿಸಿದರು. ಪರಿಣಾಮ ಭಾರತ ತಂಡ ಎರಡನೇ ದಿನದಾಟದಲ್ಲಿ ತನ್ನ ಕೈಲಿದ್ದ 4 ವಿಕೆಟ್’ಗಳಲ್ಲಿ 126 ರನ್’ಗಳನ್ನು ಮಾತ್ರವೇ ದಕ್ಕಿಸಿಕೊಂಡಿತು.