ಢಾಕಾ: ಭಾರತ ಕ್ರಿಕೆಟ್ ತಂಡ ಡಿಸೆಂಬರ್ ತಿಂಗಳಲ್ಲಿ ಬಾಂಗ್ಲಾದೇಶ ಪ್ರವಾಸಕ್ಕೆ ತೆರಳಲಿದ್ದು, ಮೂರು ಏಕದಿನ ಮತ್ತು ಎರಡು ಟೆಸ್ಟ್ ಪಂದ್ಯಗಳ ಸರಣಿ ಆಡಲಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಅಧ್ಯಕ್ಷ ನಜ್ಮುಲ್ ಹಸನ್, ಮೂರೂ ಏಕದಿನ ಪಂದ್ಯಗಳಿಗೆ ಢಾಕಾದ ಮೀರ್‌ಪುರ ಕ್ರೀಡಾಂಗಣ ಆತಿಥ್ಯ ವಹಿಸಲಿದ್ದು, ಡಿ.4, 7 ಮತ್ತು 10 ರಂದು ನಡೆಯಲಿದೆ ಎಂದು ತಿಳಿಸಿದ್ದಾರೆ.
ಮೊದಲ ಟೆಸ್ಟ್ ಡಿ.14 ರಿಂದ 18ರ ವರೆಗೆ ಚಟಗಾಂವ್‌ನಲ್ಲಿ ಹಾಗೂ ಎರಡನೇ ಟೆಸ್ಟ್ ಡಿ.22 ರಿಂದ 26ರ ವರೆಗೆ ಢಾಕಾದಲ್ಲಿ ಆಯೋಜನೆಯಾಗಿದೆ.ಭಾರತ ತಂಡ 2015 ರಲ್ಲಿ ಕೊನೆಯದಾಗಿ ಬಾಂಗ್ಲಾ ಪ್ರವಾಸ ಕೈಗೊಂಡಿತ್ತು.
ಆ ಪ್ರವಾಸದಲ್ಲಿ ಏಕದಿನ ಸರಣಿಯಲ್ಲಿ 1–2 ರಲ್ಲಿ ಸೋತಿದ್ದ ಭಾರತ, ಏಕೈಕ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು. ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಭಾಗವಾಗಿ ಟೆಸ್ಟ್ ಸರಣಿ ನಡೆಯಲಿರುವುದರಿಂದ ಭಾರತ ತಂಡಕ್ಕೆ ತನ್ನ ಪಾಯಿಂಟ್‌ಗಳನ್ನು ಹೆಚ್ಚಿಸಲು ಇದು ಉತ್ತಮ ಅವಕಾಶ ಎನಿಸಿದೆ.
ಕಳೆದ ಬಾರಿಯ ರನ್ನರ್ ಅಪ್ ಭಾರತ, ಇದೀಗ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.