ದುಬೈ : 2025ರ ಟಿ20 ಏಷ್ಯಾಕಪ್ ಟೂರ್ನಿ ಶುರುವಾಗಿದ್ದು, ಇಂದು ಟೀಂ ಇಂಡಿಯಾ, ಯುಎಇ ವಿರುದ್ಧ ಪಂದ್ಯದ ಮೂಲಕ ಅಭಿಯಾನ ಶುರು ಮಾಡಲಿದೆ. ಪ್ರಶಸ್ತಿ ಗೆಲ್ಲುವ ಪ್ರಬಲ ಸ್ಪರ್ಧಿಯಾಗಿರುವ ಭಾರತ ತಂಡವು ಇಂದು ಆತಿಥೇಯ ಯುನೈಟೆಡ್ ಅರಬ್ ಎಮಿರೇಟ್ಸ್ ವಿರುದ್ಧ ತನ್ನ ಅಭಿಯಾನ ಶುರು ಮಾಡಲಿದೆ. ರಾತ್ರಿ 8ಕ್ಕೆ ಪಂದ್ಯ ಶುರುವಾಗಲಿದೆ. ಭಾರತ ತನ್ನ ಮುಂದಿನ ಪಂದ್ಯವನ್ನ ಪಾಕಿಸ್ತಾನ ವಿರುದ್ಧ ಸೂಪರ್ ಸಂಡೇ ಎದುರಿಸಲಿದೆ. ಹೀಗಾಗಿ ಆ ದೊಡ್ಡ ಪಂದ್ಯಕ್ಕೂ ಮೊದಲು, ಟೀಂ ಇಂಡಿಯಾಕ್ಕೆ ಈ ಪಂದ್ಯ ಮಹತ್ವದ್ದಾಗಿದೆ.
ʻಎʼ ತಂಡದಲ್ಲಿರುವ ಭಾರತ ಸೂಪರ್ ಸಿಕ್ಸ್ ಹಂತ ಪ್ರವೇಶಿಸಲು ಯುಎಇ, ಒಮನ್ ಹಾಗೂ ಪಾಕಿಸ್ತಾನ ತಂಡಗಳ ವಿರುದ್ಧ ಸೆಣಸಬೇಕಿದೆ. ಮುಖ್ಯ ಕೋಚ್ ಗೌತಮ್ ಗಂಭೀರ್ ತಮ್ಮ ಹಳೆಯ ತಂತ್ರದೊಂದಿಗೆ ಮುಂದುವರಿದರೆ, ಸೂರ್ಯಕುಮಾರ್ ಯಾದವ್ ಚೊಚ್ಚಲ ಬಾರಿಗೆ ನಾಯಕನಾಗಿ ಏಷ್ಯಾ ಕಪ್ನಲ್ಲಿ ಮುನ್ನಡೆಸುತ್ತಿದ್ದು, ಯಾವ ತಂತ್ರ ಹೂಡಲಿದ್ದಾರೆ ಅನ್ನೋದನ್ನ ಕಾದುನೋಡಬೇಕಿದೆ.
ಗಂಭೀರ್ ಟೀಂ ಇಂಡಿಯಾದ ಮುಖ್ಯಕೋಚ್ ಆದಾಗಿನಿಂದ ಭಾರತ ತಂಡ ಎಲ್ಲಾ ಸ್ವರೂಪಗಳಲ್ಲಿ ಆಲ್‌ರೌಂಡರ್‌ಗಳಿಗೆ ಹೆಚ್ಚಿನ ಆದ್ಯತೆ ನೀಡಿದೆ. ಬ್ಯಾಟಿಂಗ್ ಅನ್ನು ಬಲಪಡಿಸಲು ಮತ್ತು 8ನೇ ಕ್ರಮಾಂಕದವರೆಗೆ ಉತ್ತಮ ಬ್ಯಾಟ್ಸ್‌ಮನ್‌ಗಳನ್ನ ಹೊಂದಲು ಈ ಆದ್ಯತೆ ನೀಡಲಾಗಿದೆ. ಅದರಂತೆ ಇಂದಿನ ಪಂದ್ಯದಲ್ಲಿ ಆಲ್‌ರೌಂಡರ್ ಆಗಿ ಹಾರ್ದಿಕ್ ಪಾಂಡ್ಯ ಹಾಗೂ ಸ್ಪಿನ್ ಆಲ್‌ರೌಂಡರ್ ಆಗಿ ಅಕ್ಷರ್ ಪಟೇಲ್ ಕಣಕ್ಕಿಳಿಯುವ ಸಾಧ್ಯತೆಯಿದೆ.
Preps in full swing 💪
— BCCI (@BCCI) September 7, 2025
The countdown to 𝙈𝙖𝙩𝙘𝙝 𝘿𝙖𝙮 begins ⏳#TeamIndia | #AsiaCup2025 pic.twitter.com/3SC57XILxD
ವಿಕೆಟ್ ಕೀಪರ್‌ಗಳ ಪೈಕಿ ಜಿತೇಶ್ ಶರ್ಮಾ, ಸಂಜು ಸ್ಯಾಮ್ಸನ್ ತಂಡದಲ್ಲಿದ್ದಾರೆ. ಸ್ಯಾಮ್ಸನ್ ಅವರ ಸ್ಫೋಟಕ ಬ್ಯಾಟಿಂಗ್‌ಗಿಂತ ಜಿತೇಶ್ ಅವರ ಫಿನಿಷರ್ ಪಾತ್ರಕ್ಕೆ ಆದ್ಯತೆ ಸಿಗುವುದು ಖಚಿತ ವಾಗಿದೆ, ಅಲ್ಲದೇ ಶುಭ್‌ಮನ್ ಗಿಲ್ ಅಗ್ರ ಕ್ರಮಾಂಕಕ್ಕೆ ಮರಳಿರುವುದರಿಂದ ಸ್ಯಾಮ್ಸನ್‌ಗೆ ಪ್ಲೇಯಿಂಗ್ 11ನಲ್ಲಿ ಸ್ಥಾನ ಸಿಗುವುದೂ ಸಹ ಅನುಮಾನ ಎಂದೇ ಹೇಳಲಾಗುತ್ತಿದೆ.
ಯುಎಇ ವಿರುದ್ಧ ಪಂದ್ಯಕ್ಕೂ ಮುನ್ನ ನಡೆದ ಪ್ರಾಕ್ಟೀಸ್ ಸೆಷನ್‌ನಲ್ಲಿ ಅಭಿಷೇಕ್ ಶರ್ಮಾ ಅಬ್ಬರಿಸಿದ್ದಾರೆ. ಬ್ಯಾಟಿಂಗ್ ಅಭ್ಯಾಸದ ವೇಳೆ 25 ರಿಂದ 30 ಸಿಕ್ಸರ್‌ಗಳನ್ನ ಬಾರಿಸುವ ಮೂಲಕ ಎಲ್ಲರನ್ನು ಬೆರಗುಗೊಳಿಸಿದ್ದಾರೆ. ಹೀಗಾಗಿ ಭಾರತ ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದರೆ, ಬೃಹತ್ ಮೊತ್ತ ಪೇರಿಸುವ ವಿಶ್ವಾಸವನ್ನು ಮೂಡಿಸಿದ್ದಾರೆ.















