ಮನೆ ಕ್ರೀಡೆ ಭಾರತ VS ಆಸ್ಟ್ರೇಲಿಯಾ: ಅಂತಿಮ ಟೆಸ್ಟ್ ಡ್ರಾದಲ್ಲಿ ಅಂತ್ಯ

ಭಾರತ VS ಆಸ್ಟ್ರೇಲಿಯಾ: ಅಂತಿಮ ಟೆಸ್ಟ್ ಡ್ರಾದಲ್ಲಿ ಅಂತ್ಯ

0

ಅಹಮದಾಬಾದ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ.

ಇದರೊಂದಿಗೆ ನಾಲ್ಕು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ ಬಳಗವು 2-1 ಅಂತರದ ಗೆಲುವು ದಾಖಲಿಸಿದೆ. ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯದ ಕೊನೆಯ ದಿನದಾಟದಲ್ಲಿ ಆಸ್ಟ್ರೇಲಿಯಾ ತಂಡವು ಎರಡನೇ ಇನಿಂಗ್ಸ್‌ ನಲ್ಲಿ 78.1 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು.

ಪಂದ್ಯ ಡ್ರಾದತ್ತ ಮುಖ ಮಾಡಿದ ಹಿನ್ನೆಲೆಯಲ್ಲಿ ಟೀ ವಿರಾಮದ ಬಳಿಕ ಇತ್ತಂಡಗಳ ನಾಯಕರು ಪಂದ್ಯ ನಿಗದಿತ ಅವಧಿಗೂ ಮೊದಲೇ ಮುಕ್ತಾಯಗೊಳಿಸಲು ಸಮ್ಮತಿ ಸೂಚಿಸಿದರು.

ಆಸ್ಟ್ರೇಲಿಯಾದ ಪರ ಅಂತಿಮ ದಿನದಾಟದಲ್ಲಿ ಟ್ರಾವಿಸ್ ಹೆಡ್ (90) ಹಾಗೂ ಮಾರ್ನಸ್ ಲಾಬುಷೇನ್ (63*) ಅರ್ಧಶತಕಗಳನ್ನು ಗಳಿಸಿದರು. ನಾಯಕ ಸ್ಟೀವ್ ಸ್ಮಿತ್ 10 ರನ್ ಗಳಿಸಿ ಔಟಾಗದೆ ಉಳಿದರು.

ಆಸ್ಟ್ರೇಲಿಯಾದ 480 ರನ್ನಿಗೆ ಉತ್ತರವಾಗಿ ಭಾರತ ತಂಡವು ಮೊದಲ ಇನಿಂಗ್ಸ್‌ನಲ್ಲಿ, ಮಾಜಿ ನಾಯಕ ವಿರಾಟ್ ಕೊಹ್ಲಿ (186) ಹಾಗೂ ಶುಭಮನ್ ಗಿಲ್ (128) ಶತಕಗಳ ಬೆಂಬಲದಿಂದ 571 ರನ್ ಗಳಿಸಿತು. ಆಸೀಸ್ ಪರ ಮೊದಲ ಇನಿಂಗ್ಸ್‌ನಲ್ಲಿ ಉಸ್ಮಾನ್ ಖ್ವಾಜಾ (180) ಹಾಗೂ ಕ್ಯಾಮರೂನ್ ಗ್ರೀನ್ (114) ಶತಕ ಗಳಿಸಿದರು.

ಭಾರತದ ಪರ ಅಶ್ವಿನ್ ಆರು ವಿಕೆಟ್ ಕಬಳಿಸಿದರು. ಜೂನ್‌ 7 ರಂದು ಇಂಗ್ಲೆಂಡಿನ ಓವಲ್‌ನಲ್ಲಿ ನಡೆಯಲಿರುವ ಐಸಿಸಿ ವಿಶ್ವ ಟೆಸ್ಟ್‌ ಚಾಂ‍ಪಿಯನ್‌ ಶಿಪ್‌ ಫೈನಲ್‌ ನಲ್ಲಿ ಮತ್ತದೇ ಆಸ್ಟ್ರೇಲಿಯಾ ತಂಡದ ಸವಾಲನ್ನು ಭಾರತ ಎದುರಿಸಲಿದೆ. ಕ್ರೈಸ್ಟ್‌ಚರ್ಚ್‌ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಶ್ರೀಲಂಕಾ ತಂಡವು ಸೋಲುವುದರೊಂದಿಗೆ ಭಾರತದ ಫೈನಲ್‌ ಹಾದಿ ಸುಗಮವಾಯಿತು. ಭಾರತದ ವಿರುದ್ಧದ ಸರಣಿಯ ಮೂರನೇ ಪಂದ್ಯದಲ್ಲಿ ಗೆಲುವು ದಾಖಲಿಸಿದ್ದ ಆಸ್ಟ್ರೇಲಿಯಾ ಈಗಾಗಲೇ, ಡಬ್ಲ್ಯುಟಿಸಿ ಫೈನಲ್ ಟಿಕೆಟ್ ಖಚಿತಪಡಿಸಿದೆ. ಮತ್ತೊಂದೆಡೆ ಭಾರತ ಸತತ ಎರಡನೇ ಬಾರಿಗೆ ವಿಶ್ವ ಟೆಸ್ಟ್‌ ಚಾಂ‍ಪಿಯನ್‌‌ ಶಿಪ್‌ ಫೈನಲ್‌ ‌ಗೆ ಪ್ರವೇಶಿಸಿದೆ.

2021ರಲ್ಲಿ ನಡೆದ ಚೊಚ್ಚಲ ವಿಶ್ವ ಟೆಸ್ಟ್‌ ಚಾಂ‍ಪಿಯನ್‌ ಶಿಪ್‌ ಫೈನಲ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಸೋಲನುಭವಿಸಿದ್ದ ಭಾರತ ರನ್ನರ್-ಅಪ್ ಪ್ರಶಸ್ತಿಗೆ ಭಾಜನವಾಗಿತ್ತು.

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ 2023 ಫಲಿತಾಂಶ ಇಂತಿದೆ:

ಮೊದಲ ಟೆಸ್ಟ್ (ನಾಗಪುರ): ಭಾರತಕ್ಕೆ ಇನಿಂಗ್ಸ್ ಹಾಗೂ 132 ರನ್ ಅಂತರದ ಗೆಲುವು ದ್ವಿತೀಯ ಟೆಸ್ಟ್ (ಡೆಲ್ಲಿ): ಭಾರತಕ್ಕೆ ಆರು ವಿಕೆಟ್ ಗೆಲುವು

ಮೂರನೇ ಟೆಸ್ಟ್ (ಇಂದೋರ್): ಆಸ್ಟ್ರೇಲಿಯಾಕ್ಕೆ 9 ವಿಕೆಟ್ ಗೆಲುವು

ನಾಲ್ಕನೇ ಟೆಸ್ಟ್ (ಅಹಮದಾಬಾದ್): ಡ್ರಾ