ಮನೆ ಕ್ರೀಡೆ ನ್ಯೂಜಿಲೆಂಡ್ ಎದುರು ಒಡಿಐ ಸರಣಿ ಗೆದ್ದ ಭಾರತ

ನ್ಯೂಜಿಲೆಂಡ್ ಎದುರು ಒಡಿಐ ಸರಣಿ ಗೆದ್ದ ಭಾರತ

0

ರಾಯಪುರ: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಶುಕ್ರವಾರ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತ ತಂಡವು ಎಂಟು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಉಳಿದಿರುವಂತೆಯೇ 2-0 ಅಂತರದಲ್ಲಿ ವಶಪಡಿಸಿಕೊಂಡಿದೆ.

ರಾಯಪುರದಲ್ಲಿ ನಡೆದ ಪಂದ್ಯದಲ್ಲಿ ಭಾರತೀಯ ಬೌಲರ್‌ಗಳ ಸಾಂಘಿಕ ದಾಳಿಗೆ ಸಿಲುಕಿದ ನ್ಯೂಜಿಲೆಂಡ್ 34.3 ಓವರ್‌ಗಳಲ್ಲಿ 108 ರನ್‌ಗಳಿಗೆ ಸರ್ವಪತನ ಕಂಡಿತು.

ಬಳಿಕ ಗುರಿ ಬೆನ್ನಟ್ಟಿದ ಭಾರತ, ನಾಯಕ ರೋಹಿತ್ ಶರ್ಮಾ ಅರ್ಧಶತಕದ ಬೆಂಬಲದೊಂದಿಗೆ 20.1 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

 50 ಎಸೆತಗಳನ್ನು ಎದುರಿಸಿದ ರೋಹಿತ್, ಏಳು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 51 ರನ್ ಗಳಿಸಿದರು.

ಉದಯೋನ್ಮುಖ ಬ್ಯಾಟರ್ ಶುಭಮನ್ ಗಿಲ್, 40 ರನ್ (53 ಎಸೆತ, 6 ಬೌಂಡರಿ) ಗಳಿಸಿ ಔಟಾಗದೆ ಉಳಿದರು.

ಮಾಜಿ ನಾಯಕ ವಿರಾಟ್ ಕೊಹ್ಲಿ 11 ಮತ್ತು ಇಶಾನ್ ಕಿಶನ್ ಅಜೇಯ 8 ರನ್ ಗಳಿಸಿದರು.

ಈ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 10.3 ಓವರ್‌ಗಳಲ್ಲೇ 15 ರನ್ನಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಫಿನ್ ಅಲೆನ್ (0), ಡೆವೊನ್ ಕಾನ್ವೇ (7), ಹೆನ್ರಿ ನಿಕೋಲಸ್ (2), ಡೆರಿಲ್ ಮಿಚೆಲ್ (1), ಟಾಮ್ ಲೆಥಮ್ (1) ನಿರಾಸೆ ಮೂಡಿಸಿದರು.

ಕೆಳ ಕ್ರಮಾಂಕದಲ್ಲಿ ಗ್ಲೆನ್ ಫಿಲಿಪ್ಸ್ (36), ಮೈಕಲ್ ಬ್ರೇಸ್‌ವೆಲ್ (22) ಮತ್ತು ಮಿಚೆಲ್ ಸ್ಯಾಂಟ್ನರ್ (27) ಸ್ಪಲ್ವ ಹೊತ್ತು ಪ್ರತಿರೋಧ ಒಡ್ಡಿದರು. ಇನ್ನುಳಿದಂತೆ ಹೆನ್ರಿ ಶಿಪ್ಲೆ (2*), ಲಾಕಿ ಫರ್ಗ್ಯೂಸನ್ (1), ಬ್ಲೇರ್ ಟಿಕ್ನರ್ (2) ರನ್ ಗಳಿಸಿದರು.

ಭಾರತದ ಪರ ಮೊಹಮ್ಮದ್ ಶಮಿ ಮೂರು, ವಾಷಿಂಗ್ಟನ್ ಸುಂದರ್ ಹಾಗೂ ಹಾರ್ದಿಕ್ ಪಾಂಡ್ಯ ತಲಾ ಎರಡು ಮತ್ತು ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್ ಹಾಗೂ ಕುಲದೀಪ್ ಯಾದವ್ ತಲಾ ಒಂದು ವಿಕೆಟ್ ಗಳಿಸಿ ಮಿಂಚಿದರು.