ಹೊಸಪೇಟೆ: ಪೆಹಲ್ಗಾಮ್‌ನಲ್ಲಿ ನಡೆದ ಭೀಕರ ಘಟನೆಯಲ್ಲಿ 26 ಭಾರತೀಯ ನಾಗರಿಕರ ಹತ್ಯೆಗೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಭದ್ರತಾ ವಿಫಲತೆಯೇ ಕಾರಣ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ. ಹೊಸಪೇಟೆಯಲ್ಲಿ ನಡೆದ “ಸಮರ್ಪಣಾ ಸಂಕಲ್ಪ ಸಮಾವೇಶ”ದಲ್ಲಿ ಮಾತನಾಡಿದ ಅವರು, ಈ ವಿಷಯದಲ್ಲಿ ಮೋದಿ ನಿಷ್ಕ್ರಿಯತೆ ತೋರುತ್ತಿರುವುದನ್ನು ತೀವ್ರವಾಗಿ ಟೀಕಿಸಿದರು. ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ನಡೆದ ಹತ್ಯೆಗೆ ತುರ್ತು ಭದ್ರತಾ ಕ್ರಮ ಕೈಗೊಳ್ಳಲಾಗಿಲ್ಲ. ಪ್ರವಾಸಿಗರಿಗೆ ಪೊಲೀಸ್ ಹಾಗೂ ಗಡಿ ಭದ್ರತಾ ಪಡೆಗಳ ರಕ್ಷಣೆ ಇಲ್ಲದಿರುವುದರಿಂದ ಇಂತಹ ಭೀಕರ ಘಟನೆ ಸಂಭವಿಸಿತು ಎಂದು ತಿಳಿಸಿದರು.
“ಪ್ರಧಾನಿ ಮೋದಿ ಈ ಘಟನೆ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ನಾನು ಕೇಳಿದ ಪ್ರಶ್ನೆಗಳಿಗೆ ಯಾವ ಉತ್ತರವೂ ಇಲ್ಲ” ಎಂದು ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಮೇ 17ರಂದು ಪ್ರಧಾನಿ ಕಾಶ್ಮೀರಕ್ಕೆ ಹೋಗಬೇಕಿತ್ತು. ಆದರೆ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಅವರು ಭೇಟಿಯನ್ನು ರದ್ದುಗೊಳಿಸಿದರು. “ಆದರೆ ಇದೇ ಎಚ್ಚರಿಕೆಯನ್ನು ಜನರಿಗೆ ನೀಡಿದ್ದರೆ, ಈ ಅಮೂಲ್ಯ ಜೀವಗಳನ್ನು ಉಳಿಸಬಹುದಿತ್ತು” ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಈ ಪಾಕಿಸ್ತಾನದ ಕೆಲಸ ಸದಾ ಭಾರತದ ಮೇಲೆ ಗೂಬೆ ಕೂರಿಸುವುದೇ ಆಗಿದೆ. ಅವರಿಗೆ ಶಕ್ತಿಯಿಲ್ಲ ಎಂದರೂ ಚೀನಾದವರಿಂದ ಬೆಂಬಲ ಪಡೆದು ನಮ್ಮ ಮೇಲೆ ದಾಳಿ ಮಾಡಿ ಪ್ರಚೋದನೆ ನೀಡುತ್ತಿದ್ದಾರೆ. ಇದನ್ನು ಎಂದಿಗೂ ಸಹ ನಮ್ಮ ದೇಶ ಸಹಿಸುವುದಿಲ್ಲ. ನಾವು ಒಗ್ಗಟ್ಟಿನಿಂದ ಇದ್ದೇವೆ.
ರಾಷ್ಟ್ರ ಮಟ್ಟದಲ್ಲಿ ಮೋದಿ ಸರ್ಕಾರದ ವಿಫಲತೆಗಳನ್ನು ವಿಸ್ತೃತವಾಗಿ ವಿಶ್ಲೇಷಿಸಿದ ಖರ್ಗೆ, ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಶ್ಲಾಘಿಸಿದರು. “ಎಲ್ಲಾ ಗ್ಯಾರಂಟಿಗಳನ್ನು ಯಶಸ್ವಿಯಾಗಿ ನಿರ್ವಹಿಸಿರುವ ಕಾಂಗ್ರೆಸ್ ಸರ್ಕಾರ, ಜನರ ಕಲ್ಯಾಣಕ್ಕಾಗಿ ಕಾರ್ಯನಿರತವಾಗಿದೆ” ಎಂದರು. ಕೇಂದ್ರ ಸರ್ಕಾರ ನೀಡಿದ ಭರವಸೆಗಳೆಲ್ಲಾ ಕೇವಲ ಮಾತುಗಳು. “ಕಪ್ಪುಹಣ ತರುವ ಭರವಸೆ, ಉದ್ಯೋಗ ನೀಡುವ ಮಾತು – ಯಾವುದು ಕೂಡಾ ನಿಜವಾಗಿಲ್ಲ. ಬದಲಾಗಿ ನೋಟು ಅಮಾನ್ಯಗೊಳಿಸಿ ಬಡವರ ಬದುಕಿಗೆ ಹೊಡೆತ ಕೊಟ್ಟಿದ್ದಾರೆ” ಎಂದು ಖರ್ಗೆ ಹೇಳಿದರು.
ರಾಹುಲ್ ಗಾಂಧಿಯ ಜಾತಿ ಗಣತಿಯ ಬಗ್ಗೆ ಪ್ರಸ್ತಾಪಿಸಿ, “ಮೊದಲು ಟೀಕಿಸಿದ ಬಿಜೆಪಿ ಈಗ ಜಾತಿ ಗಣತಿಗೆ ಒಪ್ಪಿಗೆ ಕೊಟ್ಟಿದೆ. ಆದರೆ ಇದು ಪಾರದರ್ಶಕವಾಗಿ ನಡೆಯಬೇಕು. ಜಾತಿಯ ಆಧಾರದ ಮೇಲೆ ಹೊರಮೀಸಲಾತಿ ತಪ್ಪದೇ ನೀಡಬೇಕು. ಬಡ ಲಿಂಗಾಯತರಿಗೆ ಸಹಾಯ ಮಾಡಬೇಕೆಂಬುದು ನಮ್ಮ ನಿಲುವು” ಎಂದರು. ಆದರೆ ಕೆಲ ಜನಸಂಖ್ಯೆಯ ಲೆಕ್ಕಗಳು ಅನುಮಾನಸ್ಪದವಾಗಿದ್ದು, ನಕಲಿ ದಾಖಲೆ ನೀಡಿ ಮೀಸಲಾತಿ ಪಡೆಯಲು ಯತ್ನಿಸುವವರ ವಿರುದ್ಧ ಕಟ್ಟುನಿಟ್ಟಾದ ಕ್ರಮ ಬೇಕು ಎಂದು ಸರ್ಕಾರವನ್ನು ಮನವಿ ಮಾಡಿದರು.
ಕೇವಲ ಭಾಷಣ ಮಾಡುವವರಿಂದ, ಬೊಗಳೆ ಮಾತುಗಳಿಂದ ದೇಶ ಉದ್ದಾರವಾಗುವುದಿಲ್ಲ. ಸೊಫಿಯಾ ಖುರೇಶಿ ಎನ್ನುವ ಮಿಲಿಟರಿಯ ವಕ್ತಾರೆ ಮಾತನಾಡಿದ ಮೇಲೆ ಬಿಜೆಪಿಯ ಶಾಸಕನೊಬ್ಬ ಆಕೆಗೆ ಪಾಕಿಸ್ತಾನದ ನಂಟಿದೆ ಎಂದು ಹೇಳುತ್ತಾನೆ. ಇಂತಹ ಜನರಿಗೆ ಯಾವ ಶಿಕ್ಷೆ ನೀಡಬೇಕು ಎಂಬುದನ್ನು ಜನರೇ ಹೇಳಬೇಕು. ಸೈನ್ಯದ ವಿರುದ್ಧ ಮಾತನಾಡಿದ ಆತನನ್ನು ಪಕ್ಷದಿಂದ ಕಿತ್ತು ಹಾಕಿ ಮೋದಿಯವರೇ ಏಕೆ ಇನ್ನೂ ಇಟ್ಟುಕೊಂಡು ಕುಳಿತಿದ್ದೀರಿ? ಬಿಜೆಪಿಯಲ್ಲಿ ಇರುವ ದೇಶದ್ರೋಹಿಗಳನ್ನು ಮೊದಲು ಪಕ್ಷದಿಂದ ತೆಗೆದುಹಾಕಿ ಎಂದು ಗುಡುಗಿದರು.
ಬಿಜೆಪಿಯದ್ದು ಬರೀ ಸುಳ್ಳು ಹೇಳುವುದೇ ಕೆಲಸ. ನಾವು ದೇಶದ ಬಗ್ಗೆ ಮಾತನಾಡೋಕೆ ಸಭೆ ಸೇರಿದರೆ ಅವರು ಬಿಹಾರದಲ್ಲಿ ಚುನಾವಣೆ ಭಾಷಣ ಮಾಡಿಕೊಂಡು ಓಡಾಡುತ್ತಿದ್ದರು. ಎರಡು ಸಲ ಸರ್ವ ಪಕ್ಷ ಸಭೆ ಕರೆದರೂ ಮೋದಿಯವರು ಬರಲಿಲ್ಲ. ಅವರಿಗೆ ದೇಶಪ್ರೇಮ ಇದ್ದಿದ್ದರೆ ಏಕೆ ಸರ್ವ ಪಕ್ಷ ಸಭೆಗೆ ಬರಲಿಲ್ಲ. ನಾವುಗಳು ಏನಾದರೂ ಒಂದೇ ಒಂದು ಸಭೆಗೆ ಬರದೇ ಇದ್ದರೆ ದೇಶದ್ರೋಹಿಗಳು ಎಂದು ಹಣೆಪಟ್ಟಿ ಕಟ್ಟುತ್ತಾರೆ.
ಇಂತಹ ಹೊತ್ತಿನಲ್ಲಿ ದೇಶ ಮುಖ್ಯವಾಗಬೇಕಿತ್ತು ಆದರೆ ಮೋದಿ ಮುಖ್ಯವಾಗಿದ್ದಾರೆ. ದೇಶಕ್ಕಾಗಿ ಹೋರಾಡುವ ಗುತ್ತಿಗೆಯನ್ನು ಬಿಜೆಪಿಯವರು ಮಾತ್ರ ತೆಗೆದುಕೊಂಡಿಲ್ಲ. ನಾವು ಸಹ ದೇಶಕ್ಕಾಗಿ ಹೋರಾಟ ಮಾಡಿದವರೇ. “ಭಾರತಕ್ಕಾಗಿ ಹೋರಾಡಿದ ಮಹಾತ್ಮ ಗಾಂಧಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿಯಂತಹ ನಾಯಕರ ತ್ಯಾಗದಿಂದ ಹುಟ್ಟಿದ ಪಕ್ಷ ಕಾಂಗ್ರೆಸ್. ಕಾಂಗ್ರೆಸ್ ದೇಶದ ಪ್ರಾಮಾಣಿಕ ಪಕ್ಷ. ಇಂತಹ ದೊಡ್ಡ ಇತಿಹಾಸ ಕಾಂಗ್ರೆಸ್ ಪಕ್ಷಕ್ಕಿದೆ. ಇಂತಹ ಪಕ್ಷದ ಮೇಲೆ ನೀವು ಯಾವುದೇ ಕಾರಣಕ್ಕೂ ಗೂಬೆ ಕೂರಿಸಲು ಸಾಧ್ಯವಿಲ್ಲ. ನಾವು ಬಗ್ಗುವವರಲ್ಲ, ಮಣಿಯುವವರಲ್ಲ” ಎಂದು ತಿಳಿಸುತ್ತಾ, ಕಾಂಗ್ರೆಸ್ ಪಕ್ಷದ ಜೊತೆ ಚರ್ಚೆ ನಡೆಸದೇ ನಮ್ಮ ದೇಶದ ನಿಯೋಗವನ್ನು ಭಯೋತ್ಪಾದಕ ದಾಳಿಯ ಬಗ್ಗೆ ಒಂದಷ್ಟು ದೇಶಗಳಿಗೆ ತಿಳಿಸಲು ಕಳುಹಿಸುತ್ತಿದ್ದಾರೆ. ನಮಗೆ ದೇಶ ಮುಖ್ಯ. ಈ ದೇಶಕ್ಕೆ ಸಂವಿಧಾನ ನೀಡಿದ ಪಕ್ಷ ನಮ್ಮದು ಎಂದು ತಿಳಿಸಿದರು.