ಮಂಡ್ಯ(Mandya): ಬ್ರಿಟಿಷರ ಸರ್ವಾಧಿಕಾರದ ಆಳ್ವಿಕೆಯಿಂದ ಮುಕ್ತಗೊಳಿಸಿ ಭಾರತವನ್ನು ಸ್ವಾತಂತ್ರ್ಯಗೊಳಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ನೇತೃತ್ವದ ನಡೆದ ಅಹಿಂಸಾತ್ಮಕ ಹೋರಾಟ ವಿಶ್ವದ ಇತಿಹಾಸದಲ್ಲೇ ಮಾದರಿಯಾಗಿದೆ ಎಂದು ಕಂದಾಯ ಸಚಿವರಾದ ಆರ್ ಅಶೋಕ್ ತಿಳಿಸಿದರು.
ನಗರದ ಭಾರತ ರತ್ನ ಸರ್ .ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಹಾಗೂ ನಗರ ಸಭೆಯ ವತಿಯಿಂದ ಭಾರತ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ನೇರವೇರಿಸಿ ಅವರು ಮಾತನಾಡಿದರು.
ಯಾವುದೇ ರಕ್ತಪಾತವಿಲ್ಲದೆ, ಮದ್ದುಗುಂಡುಗಳ ಕಾಳಗವಿಲ್ಲದೆ ಸತ್ಯ, ಅಹಿಂಸೆ, ಸತ್ಯಾಗ್ರಹದಂತಹ ಅಹಿಂಸಾತ್ಮಕ ಅಸ್ತ್ರಗಳ ಮೂಲಕ ಬ್ರಿಟಿಷರನ್ನು ದೇಶ ಬಿಟ್ಟು ಹೋಗುವಂತೆ ಮಾಡಿದ ವಿನೂತನ ಹೋರಾಟವಿದು ಎಂದರು.
ಅತ್ಯಂತ ಸಂಪನ್ನ ಜನರ ಬಹುದೊಡ್ಡ ಸಂಸ್ಕ್ರತಿಯೇ ಮಂಡ್ಯ ಜಿಲ್ಲೆಯಲ್ಲಿದೆ. ಸಾಮರಸ್ಯಕ್ಕೆ, ಸಹಬಾಳ್ವೆಗೆ ಮಂಡ್ಯ ಜಿಲ್ಲೆಯ ಬಹುದೊಡ್ಡ ಉದಾಹರಣೆಯಾಗಿದೆ. ಅದ್ಭುತ ಎನಿಸುವ ಮಾನವ ಸಂಪನ್ಮೂಲವಿದೆ.
ಕೃಷಿಯ ಅಭ್ಯುದಯಕ್ಕೆ, ಸಾಹಸ ಕ್ರೀಡೆಗೆ, ಉದ್ದಿಮೆಗಳ ಸ್ಥಾಪನೆಗೆ, ಶಿಕ್ಷಣ ಸಂಸ್ಥೆಗಳ ಬೆಳವಣಿಗೆಗೆ, ಪರಿಸರದ ಸಿರಿಯನ್ನು ಹೆಚ್ಚಿಸಲಿಕ್ಕೆ ಬೇಕಾದ ಎಲ್ಲ ಅವಕಾಶಗಳನ್ನು ಮಂಡ್ಯ ಜಿಲ್ಲೆ ತನ್ನ ಮಡಿಲಿನಲ್ಲಿ ತುಂಬಿಕೊಂಡಿವೆ ಎಂದರು.
ಮೈಸೂರು ಸಕ್ಕರೆ ಕಾರ್ಖಾನೆಯು 2019-20 ನೇ ಸಾಲಿನಿಂದ ಸ್ಥಗಿತಗೊಂಡಿರುತ್ತದೆ. ಸರ್ಕಾರವು 2022-23 ನೇ ಸಾಲಿನ ಬಜೆಟ್ ನಲ್ಲಿ ರೂ.50 ಕೋಟಿ ಮಂಜೂರು ಮಾಡಿರುತ್ತದೆ. ಕಾರ್ಖಾನೆಯನ್ನು ಪ್ರಾರಂಭಿಸಲು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಈ ತಿಂಗಳಿನಲ್ಲಿ ಚಾಲನೆ ನೀಡಲಾಗುವುದು. ರೈತ ಮಕ್ಕಳ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು ರೈತ ವಿದ್ಯಾನಿಧಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಇದುವರೆವಿಗೂ 28988 ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ರೂ. 11.96 ಕೋಟಿ ಶಿಷ್ಯವೇತನವನ್ನು ನೀಡಲಾಗಿದೆ.ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 270572 ಫಲಾನುಭವಿಗಳಿಗೆ ತಲಾ 6000/- ರೂ ಸಹಾಯಧನವನ್ನು ನೀಡಲಾಗಿದೆ ಎಂದರು.
ಜಿಲ್ಲೆಯಲ್ಲಿ 233 ಗ್ರಾಮಪಂಚಾಯಿತಿಗಳ ಪೈಕಿ 231 ಗ್ರಾಮಪಂಚಾಯಿತಿಗಳಿಗೆ ಘನ ತ್ಯಾಜ್ಯ ವಿಲೇವಾರಿ ಮಾಡುವ ಸಂಬ0ಧ ಜಮೀನನ್ನು ಕಾಯ್ದಿರಿಸಲಾಗಿದೆ. ಒಟ್ಟು 1348 ಜನವಸತಿ ಗ್ರಾಮಗಳ ಪೈಕಿ ಈವರೆಗೆ 1322 ಗ್ರಾಮಗಳಿಗೆ ಸಾರ್ವಜನಿಕ ಸ್ಮಶಾನ ಸೌಲಭ್ಯ ಕಲ್ಪಿಸಲಾಗಿರುತ್ತದೆ ಎಂದರು.
ಮಂಡ್ಯ ಜಿಲ್ಲೆಯಲ್ಲಿ ಕಳೆದ 4 ವರ್ಷಗಳಲ್ಲಿ ನಿವೇಶನ ರಹಿತರಿಗೆ ಆಶ್ರಯ ಯೋಜನೆಯಡಿ ನಿವೇಶನ ಹಂಚಲು 244 ಎಕರೆ ಜಮೀನನ್ನು ಕಾಯ್ದಿರಿಸಲಾಗಿರುತ್ತದೆ. ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಯಡಿಯಲ್ಲಿ ಮಂಡ್ಯ ಜಿಲ್ಲೆಯ ಒಟ್ಟು 2,92,882 ಕುಟುಂಬಗಳಿಗೆ ಉಚಿತವಾಗಿ ಆರ್.ಟಿ.ಸಿ. , ಅಟ್ಲಾಸ್, ಆದಾಯ ಮತ್ತು ಜಾತಿ ಪ್ರಮಾಣ ಪತ್ರಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸಲಾಗಿರುತ್ತದೆ ಎಂದರು.
ಮಂಡ್ಯ ಜಿಲ್ಲೆಯ ದಾಖಲೆ ರಹಿತ ಜನವಸತಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಣೆ ಮಾಡುವ ಕುರಿತಂತೆ ಒಟ್ಟು 137 ಗ್ರಾಮಗಳಿಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದ್ದು, 100 ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದ್ದು, 740 ಜನರಿಗೆ ಹಕ್ಕು ಪತ್ರಗಳನ್ನು ನೀಡಲಾಗಿರುತ್ತದೆ ಎಂದರು.
ಮಂಡ್ಯ ಜಿಲ್ಲೆಯಲ್ಲಿ ಒಟ್ಟು 233 ಗ್ರಾಮಪಂಚಾಯಿತಿಗಳಿದ್ದು, ಒಟ್ಟು 309 ಗ್ರಾಮ ಒನ್ ಕೇಂದ್ರಗಳಿಗೆ ಅನುಮೋದನೆ ನೀಡಲಾಗಿದ್ದು, ಸದರಿ ಕೇಂದ್ರದಲ್ಲಿ 79 ಇಲಾಖೆಗಳ ಒಟ್ಟು 799 ಸೇವೆಗಳು ಲಭ್ಯವಿದ್ದು, ಜೂನ್ 2022 ರಿಂದ ಸೇವೆ ಪ್ರಾರಂಭವಾಗಿದ್ದು, 20000 ಕ್ಕಿಂತ ಹೆಚ್ಚು ಅರ್ಜಿಗಳು ಸ್ವೀಕೃತವಾಗಿರುತ್ತವೆ ಎಂದರು.
ಹಲೋ ಕಂದಾಯ ಸಚಿವರೆ ಯೋಜನೆಯಡಿ 72 ಗಂಟೆಗಳಲ್ಲಿ ಮನೆ ಬಾಗಿಲಿಗೆ ಪಿಂಚಣಿ ಆದೇಶ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಈ ಯೋಜನೆಯಡಿ ಮಂಡ್ಯ ಜಿಲ್ಲೆಯಲ್ಲಿ ಇದುವರೆಗೆ 1470 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿರುತ್ತದೆ. ಸಾಮಾಜಿಕ ಭದ್ರತಾ ಯೋಜನೆಯಡಿ 9 ವಿವಿಧ ಸ್ಕಿಂಗಳಲ್ಲಿ ಮಂಡ್ಯ ಜಿಲ್ಲೆಯಲ್ಲಿ ಒಟ್ಟು 3,56,637 ಜನ ಫಲಾನುಭವಿಗಳು ಮಾಸಿಕ ಪಿಂಚಣಿಯನ್ನು ಪಡೆಯುತ್ತಿರುತ್ತಾರೆ ಎಂದರು.
ಅಮೃತ ಯೋಜನೆಯಡಿ ಮಂಡ್ಯ ಜಿಲ್ಲೆಯ 25 ಅಂಗನವಾಡಿ ಕೇಂದ್ರಗಳ ಉನ್ನತೀಕರಣಕ್ಕಾಗಿ ತಲಾ ರೂ.1.00 ಲಕ್ಷದಂತೆ ಒಟ್ಟು ರೂ. 25.00 ಲಕ್ಷಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. 2022-23ನೇ ಸಾಲಿನಲ್ಲಿ ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ ಮಂಡ್ಯ ಜಿಲ್ಲೆಯ 3100 ಫಲಾನುಭವಿಗಳಿಗೆ ಒಟ್ಟು 3 ಕೋಟಿ 85 ಲಕ್ಷಗಳ ಪ್ರೋತ್ಸಾಹ ಧನವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ ಎಂದರು.
ಜಲ ಜೀವನ್ ಮಿಷನ್ ಹಂತ-1 ರಲ್ಲಿ ಕೆ.ಆರ್.ಪೇಟೆ, ಪಾಂಡವಪುರ ಮತ್ತು ನಾಗಮಂಗಲ ತಾಲ್ಲೂಕಿನ ಒಟ್ಟು 794 ಜನವಸತಿಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ತೆಗೆದುಕೊಳ್ಳಲಾಗಿದೆ. ಜಲ ಜೀವನ್ ಮಿಷನ್ ಹಂತ-2ರಲ್ಲಿ ಮದ್ದೂರು, ಮಳವಳ್ಳಿ, ಮಂಡ್ಯ ಮತ್ತು ಶ್ರೀರಂಗಪಟ್ಟಣ ತಾಲ್ಲೂಕಿನ ಒಟ್ಟು 570 ಜನವಸತಿಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ತೆಗೆದುಕೊಳ್ಳಲಾಗಿದೆ ಎಂದರು.
ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯ ಪಥಸಂಚಲನದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪ್ರಥಮ ಸ್ಥಾನ, ಅಬಕಾರಿ ಇಲಾಖೆ ದ್ವಿತೀಯ ಸ್ಥಾನ, ಜಿಲ್ಲಾ ಗೃಹ ರಕ್ಷಕ ಪುರುಷದಳ ತೃತೀಯ ಸ್ಥಾನ ಪಡೆದಿರುತ್ತಾರೆ. ಶಾಲಾ ವಿಭಾಗದ ಎರಡನೇ ಪಟ್ಟಿಯಲ್ಲಿ ಆದರ್ಶ ಪ್ರೌಢಶಾಲೆ ಪ್ರಥಮ ಸ್ಥಾನ, ಪಿ.ಇ.ಎಸ್ ಪ್ರೌಢಶಾಲೆ ದ್ವಿತೀಯ ಸ್ಥಾನ, ಅರಕೇಶ್ವರ ನಗರ ಪ್ರೌಢಶಾಲೆ ತೃತೀಯ ಸ್ಥಾನ ಪಡೆದಿದ್ದಾರೆ.
ಎನ್.ಸಿ.ಸಿ ವಿಭಾಗದಲ್ಲಿ ಪಿ.ಇ.ಎಸ್ ಬಾಲಕರ ತಂಡ ಪ್ರಥಮ ಸ್ಥಾನ, ಸರ್ಕಾರಿ ಬಾಲಕರ ಕಾಲೇಜು ದ್ವಿತೀಯ ಸ್ಥಾನ, ಸರ್ಕಾರಿ ಮಹಿಳಾ ಕಾಲೇಜು ತೃತೀಯ ಸ್ಥಾನ ಹಾಗೂ ಶಾಲಾ ವಿಭಾಗದಲ್ಲಿ ಪ್ರಥಮ ಬಹುಮಾನ ಕಾರ್ಮೇಲ್ ಕಾನ್ವೆಂಟ್ ಪ್ರೌಢಶಾಲೆ, ಸೇಂಟ್ ಜೋಸೆಫ್ ಪ್ರೌಢಶಾಲೆ ದ್ವಿತೀಯ ಸ್ಥಾನ, ರೋಟರಿ ಪ್ರೌಢಶಾಲೆ ತೃತೀಯ ಸ್ಥಾನ ಪಡೆದಿರುತ್ತಾರೆ.
ಜಿಲ್ಲೆಯ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಂದ ಸಾಮೂಹಿಕ ಕವಾಯತು, ಕಾರ್ಮೆಲ್ ಕಾನ್ವೆಂಟ್ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ರಾಷ್ಟ್ರೀಯ ಭಾವೈಕ್ಯತೆ ಮೂಡಿಸುವುದು, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್ ಮಕ್ಕಳಿಂದ ನೃತ್ಯ, ಗೀತಾಂಜಲಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಭಾರತೀಯ ಸಾಂಸ್ಕೃತಿಕ ವೈವಿಧ್ಯತೆ, ಸ್ಯಾಂಥೋಮ್ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ವೀರ ಸೇನಾನಿ ಸೇರಿದಂತೆ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ವಿಧಾನಸಭಾ ಶಾಸಕರಾದ ಎಂ.ಶ್ರೀನಿವಾಸ್, ಲೋಕಸಭಾ ಸದಸ್ಯರಾದ ಸುಮಲತಾ ಅಂಬರೀಶ್, ನಗರಸಭೆ ಅಧ್ಯಕ್ಷರಾದ ಹೆಚ್.ಎಸ್ ಮಂಜು, ಉಪಾಧ್ಯಕ್ಷೆ ಇಷ್ರತ್ ಫಾತಿಮಾ, ಮುಡ ಅಧ್ಯಕರಾದ ಶ್ರೀನಿವಾಸ್, ಜಿಲ್ಲಾಧಿಕಾರಿ ಎಸ್.ಅಶ್ವತಿ, ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿ.ಪಂ. ಸಿಇಒ ಶಾಂತ ಎಲ್. ಹುಲ್ಮನಿ, ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು, ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.
ಭಾರತದ ಸ್ವಾತಂತ್ರದ ಹೋರಾಟ ವಿಶ್ವದ ಇತಿಹಾಸದಲ್ಲೇ ಮಾದರಿ: ಆರ್ ಅಶೋಕ್
Saval TV on YouTube