ಮನೆ ಕಾನೂನು ಮಾಹಿತಿ ಅಗಾಧವಾಗಿದೆ ಎಂದು ಆರ್‌ಟಿಐ ಕಾಯಿದೆಯಡಿ ಮಾಹಿತಿ ನಿರಾಕರಿಸುವಂತಿಲ್ಲ: ದೆಹಲಿ ಹೈಕೋರ್ಟ್

ಮಾಹಿತಿ ಅಗಾಧವಾಗಿದೆ ಎಂದು ಆರ್‌ಟಿಐ ಕಾಯಿದೆಯಡಿ ಮಾಹಿತಿ ನಿರಾಕರಿಸುವಂತಿಲ್ಲ: ದೆಹಲಿ ಹೈಕೋರ್ಟ್

0

ಮಾಹಿತಿ ಹಕ್ಕು ಕಾಯಿದೆ (ಆರ್‌ಟಿಐ ಕಾಯಿದೆ) ಅಡಿಯಲ್ಲಿ ಕೇಳಲಾದ ಮಾಹಿತಿ ಅಗಾಧ ಪ್ರಮಾಣದಲ್ಲಿದೆ ಎಂಬ ಕಾರಣಕ್ಕಾಗಿ ಅಧಿಕಾರಿ ಮಾಹಿತಿ ನಿರಾಕರಿಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ಹೇಳಿದೆ .

Join Our Whatsapp Group

ನ್ಯಾಯಾಲಯ ಈ ವಾದ ಪುರಸ್ಕರಿಸಿದರೆ, ಅದು ಆರ್‌ಟಿಐ ಕಾಯಿದೆಯ ಸೆಕ್ಷನ್ 8ರ ಅಡಿಯಲ್ಲಿ ವಿನಾಯಿತಿಗೆ ಎಡೆ ಮಾಡಿಕೊಡುತ್ತದೆ ಎಂದು ನ್ಯಾಯಮೂರ್ತಿ ಸುಬ್ರಮೋಣಿಯಂ ಪ್ರಸಾದ್ ಹೇಳಿದರು.

“ಪ್ರತಿವಾದಿ [ಆರ್‌ಟಿಐ ಅರ್ಜಿದಾರರು] ಇಲ್ಲಿ ಕೋರಿರುವ ಮಾಹಿತಿಯು ಆರ್‌ಟಿಐ ಕಾಯಿದೆಯ ಸೆಕ್ಷನ್ 8ರಲ್ಲಿ ಒಳಗೊಂಡಿರುವ ಯಾವುದೇ ವಿನಾಯಿತಿಗಳಡಿ ಬರುವುದಿಲ್ಲ. ಪ್ರತಿವಾದಿ ಕೇಳಿದ ಮಾಹಿತಿಯನ್ನು ನೀಡದಿರಲು ರಿಟ್ ಅರ್ಜಿಯಲ್ಲಿ ನೀಡಲಾದ ಏಕೈಕ ಕಾರಣವೆಂದರೆ ಮಾಹಿತಿ ದೊಡ್ಡದಾಗಿದ್ದು ಪ್ರತಿವಾದಿ ಅಪೇಕ್ಷಿಸಿದಂತೆ ಮಾಹಿತಿ ನೀಡಲು ಅಧಿಕಾರಿಗಳಿಗೆ ಸಾಧ್ಯವಿಲ್ಲ ಎಂಬುದಾಗಿದೆ. ಈ ನ್ಯಾಯಾಲಯ ಪ್ರಸ್ತುತ ರಿಟ್ ಅರ್ಜಿಯಲ್ಲಿ ಎತ್ತಿರುವ ವಿವಾದಗಳನ್ನು ಮನ್ನಿಸಿದರೆ, ಅದು ಆರ್‌ಟಿಐ ಕಾಯಿದೆಯ ಸೆಕ್ಷನ್ 8ರ ಅಡಿಯಲ್ಲಿ ಮತ್ತೊಂದು ವಿನಾಯಿತಿಗೆ ಎಡೆ ಮಾಡಿಕೊಡುತ್ತದೆ”ಎಂದು ನ್ಯಾಯಾಲಯ ಹೇಳಿತು.

ಕಮಲ್ ಜಿತ್ ಚಿಬ್ಬರ್ ಅವರು ಕೋರಿದ ಸಂಪೂರ್ಣ ಮತ್ತು ವರ್ಗೀಕೃತ ಮಾಹಿತಿಯನ್ನು ಒದಗಿಸುವಂತೆ ನಿರ್ದೇಶಿಸಿರುವ ಕೇಂದ್ರ ಮಾಹಿತಿ ಆಯೋಗದ (ಸಿಐಸಿ) ಆದೇಶ ಪ್ರಶ್ನಿಸಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಫಾರಿನ್ ಟ್ರೇಡ್ (ಐಐಎಫ್‌ಟಿ) ಸಲ್ಲಿಸಿದ್ದ ಮನವಿ ವಜಾಗೊಳಿಸಿದ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಡಿಸೆಂಬರ್ 25, 2015 ಮತ್ತು ಜನವರಿ 25, 2016ರಂದು ಸಿಐಸಿ ಎರಡು ಆದೇಶಗಳನ್ನು ಜಾರಿಗೊಳಿಸಿತು. ಮೊದಲ ಆದೇಶದಲ್ಲಿ, ಆಯೋಗ ಚಿಬ್ಬರ್‌ಗೆ ದಾಖಲೆಗಳನ್ನು ಪರಿಶೀಲಿಸಲು ಅವಕಾಶ ನೀಡುವಂತೆ ಐಐಎಫ್‌ಟಿಗೆ ಆದೇಶಿಸಿತು. ಜನವರಿ 2016ರ ಆದೇಶದಲ್ಲಿ, ಅವರು ಎತ್ತಿರುವ ಎಲ್ಲಾ 27 ಅಂಶಗಳ ಬಗ್ಗೆ ವರ್ಗೀಕೃತ ಮಾಹಿತಿ ಒದಗಿಸುವಂತೆ ಸಂಸ್ಥೆಗೆ ಸಿಐಸಿ ನಿರ್ದೇಶನ ನೀಡಿತ್ತು.

ಚಿಬ್ಬರ್ ಅನೇಕ ಆರ್‌ಟಿಐ ಅರ್ಜಿಗಳನ್ನು ಮತ್ತೆ ಮತ್ತೆ ಸಲ್ಲಿಸುತ್ತಿದ್ದು ಬೃಹತ್ ಮಾಹಿತಿ ಮತ್ತು ದಾಖಲೆಗಳನ್ನು ಕೋರುತ್ತಿದ್ದಾರೆ ಎಂದು ಐಐಎಫ್‌ಟಿ ದೂರಿತ್ತು. ಚಿಬ್ಬರ್ ಅವರು ಸಂಸ್ಥೆಯ ಮಾಜಿ ಉದ್ಯೋಗಿಯಾಗಿದ್ದು 60 ಆರ್‌ಟಿಐ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಪ್ರತಿಯೊಂದೂ 20-30 ಪ್ರಶ್ನೆಗಳನ್ನು ಹೊಂದಿದ್ದು ಉತ್ತರಿಸಲು ಅಪಾರ ಸಂಪನ್ಮೂಲ ಬೇಕಾಗುತ್ತದೆ ಎಂದು ಅದು ಹೈಕೋರ್ಟ್‌ಗೆ ತಿಳಿಸಿತ್ತು. ಸಾಕಷ್ಟು ಸಂಪನ್ಮೂಲ ಅಗತ್ಯ ಇರುವುದರಿಂದ ಆರ್‌ಟಿಐ ಕಾಯಿದೆಯ ಸೆಕ್ಷನ್ 7(9)ರ ಅಡಿಯಲ್ಲಿ ಮಾಹಿತಿ ಬಹಿರಂಗ ನಿರಾಕರಿಸಲಾಗಿದೆ ಎಂದಿತ್ತು.

ವಾದ ಪರಿಗಣಿಸಿದ ಪೀಠ ಸಿಐಸಿ ಹೊರಡಿಸಿದ ಎರಡು ಆದೇಶಗಳಲ್ಲಿ ನೇರ ಸಂಘರ್ಷವಿದೆ ಎಂಬ ವಾದ ತಿರಸ್ಕರಿಸಿತು. ಕೋರಿದ ಮಾಹಿತಿ ಆರ್‌ಟಿಐ ಕಾಯಿದೆಯ ಸೆಕ್ಷನ್ 8ರಲ್ಲಿರುವ ಯಾವುದೇ ವಿನಾಯಿತಿಗಳಲ್ಡಿ ಬರುವುದಿಲ್ಲ ಎಂದು ಹೇಳಿತು. “ಪ್ರತಿವಾದಿ ಕೋರಿದ ಮಾಹಿತಿಯು ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಯ ಮೇಲೆ ಪೂರ್ವಾಗ್ರಹ ಪೀಡಿತವಾಗಿ ಪರಿಣಾಮ ಬೀರುತ್ತದೆ ಅಥವಾ ಕೋರಿದ ಮಾಹಿತಿಯನ್ನು ಯಾವುದೇ ನ್ಯಾಯಾಲಯ ಅಥವಾ ನ್ಯಾಯಮಂಡಳಿಯಿಂದ ಪ್ರಕಟಿಸುವುದನ್ನು ಸ್ಪಷ್ಟವಾಗಿ ನಿಷೇಧಿಸಲಾಗಿದೆ ಅಥವಾ ಅದರ ಬಹಿರಂಗಪಡಿಸುವಿಕೆಯನ್ನು ನಿಷೇಧಿಸಿದೆ ಎಂಬುದು ಅರ್ಜಿದಾರರ ವಾದವಾಗಿಲ್ಲ. ನ್ಯಾಯಾಂಗ ನಿಂದನೆ ಅಥವಾ ಸಂಸತ್ತಿನ ಅಥವಾ ರಾಜ್ಯ ಶಾಸಕಾಂಗದ ಹಕ್ಕುಚ್ಯುತಿಗೆ ಕಾರಣವಾಗುತ್ತದೆ ಎಂಬುದಾಗಲಿ ಅಥವಾ ಪ್ರತಿವಾದಿ ಕೋರಿದ ಮಾಹಿತಿ ವಾಣಿಜ್ಯ ವಿಶ್ವಾಸ, ವ್ಯಾಪಾರ ರಹಸ್ಯಗಳು ಅಥವಾ ಬೌದ್ಧಿಕ ಆಸ್ತಿಯನ್ನು ಒಳಗೊಂಡಿದ್ದು, ಇವುಗಳನ್ನು ಬಹಿರಂಗಪಡಿಸುವುದು ಮೂರನೇ ವ್ಯಕ್ತಿಯ ಸ್ಪರ್ಧಾತ್ಮಕತೆಗೆ ಹಾನಿ ಮಾಡುತ್ತದೆ ಎಂದೂ ಅವರು ವಾದಿಸಿಲ್ಲ.” ಎಂದು ಆದೇಶದಲ್ಲಿ ಹೇಳಿತು.