ಮನೆ ಕಾನೂನು ಆಸ್ತಿ ಖಾತೆ ಕುರಿತ ಮಾಹಿತಿ: ವೆಬ್‌ ಹೋಸ್ಟ್‌ ಮಾಡಲು ನಗರಸಭೆಗಳಿಗೆ ಹೈಕೋರ್ಟ್‌ ಆದೇಶ

ಆಸ್ತಿ ಖಾತೆ ಕುರಿತ ಮಾಹಿತಿ: ವೆಬ್‌ ಹೋಸ್ಟ್‌ ಮಾಡಲು ನಗರಸಭೆಗಳಿಗೆ ಹೈಕೋರ್ಟ್‌ ಆದೇಶ

0

ಆಸ್ತಿ ಖಾತೆ ಕೋರಿ ಸಲ್ಲಿಸಿರುವ ಅರ್ಜಿಗಳ ಸ್ವೀಕೃತಿ ಮತ್ತು ಅವುಗಳ ಸ್ಥಿತಿಗತಿಗೆ ಸಂಬಂಧಿಸಿದ ಮಾಹಿತಿಯನ್ನು ರಾಜ್ಯದ ಎಲ್ಲಾ ಸಂಬಂಧಿತ ನಗರಸಭೆಗಳು (ಸಿಟಿ ಮುನ್ಸಿಪಲ್‌ ಕೌನ್ಸಿಲ್‌) ತಮ್ಮ ವೆಬ್‌ ಸೈಟ್‌ ನಲ್ಲಿ ವೆಬ್‌ ಹೋಸ್ಟ್‌ ಮಾಡಬೇಕು ಎಂದು ಕರ್ನಾಟಕ ಹೈಕೋರ್ಟ್‌ ನ ಕಲಬುರ್ಗಿ ಪೀಠವು ಈಚೆಗೆ ಆದೇಶಿಸಿದೆ.

ತನ್ನ ಆಸ್ತಿಗಳಿಗೆ ಸಂಬಂಧಿಸಿದಂತೆ ಇ-ಖಾತೆ/ಡಿಜಿಟಲ್‌ ಖಾತಾ ಕೋರಿ ಬೀದರ್‌ ಖಾದಿ ಗ್ರಾಮೋದ್ಯೋಗ ಸಂಘವು ನಗರಸಭೆಗೆ ಅರ್ಜಿ ಸಲ್ಲಿಸಿತ್ತು. ಈ ಸಂಬಂಧ ನಿರ್ಧಾರ ಕೈಗೊಳ್ಳಲು ವಿಫಲವಾಗಿದ್ದ ಬೀದರ್‌ ನಗರಸಭೆಯ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿದೆ.

 “ಖಾತೆ ಮಾಡಿಕೊಡುವಂತೆ ಕೋರಿ ಭೌತಿಕ ಅಥವಾ ಡಿಜಿಟಲ್‌ ಮಾದರಿಯಲ್ಲಿ ಸಲ್ಲಿಸುವ ಅರ್ಜಿಗಳ ಮಾಹಿತಿ, ಅರ್ಜಿ ಸ್ವೀಕರಿಸಿದ ದಿನಾಂಕ, ಆ ಅರ್ಜಿಗೆ ಸಂಬಂಧಿಸಿದಂತೆ ಏನೆಲ್ಲಾ ಬೆಳವಣಿಗೆಯಾಗಿದೆ ಎಂಬ ಮಾಹಿತಿಯನ್ನು ರಾಜ್ಯದಾದ್ಯಂತ ಇರುವ ಸಂಬಂಧಿತ ನಗರಸಭೆಗಳು ತಮ್ಮ ವೆಬ್‌ ಸೈಟ್‌ ನಲ್ಲಿ ಪ್ರಕಟಿಸಲು ಅಗತ್ಯವಾದ ವೆಬ್‌ ಹೋಸ್ಟ್‌ ಮಾಡುವ ವ್ಯವಸ್ಥೆಯನ್ನು ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಮತ್ತು ಪೌರಾಡಳಿತ ಇಲಾಖೆಯ ನಿರ್ದೇಶಕರು ರೂಪಿಸಬೇಕು” ಎಂದು ಹೈಕೋರ್ಟ್‌ ಈಚೆಗೆ ಆದೇಶಿಸಿದೆ.

ಭೌತಿಕ ಅಥವಾ ಡಿಜಿಟಲ್‌ ಮಾದರಿಯಲ್ಲಿ ಖಾತೆ ಕೋರಿ ಅರ್ಜಿ ಸಲ್ಲಿಸಿದಾಗ ಅದನ್ನು ಕರ್ನಾಟಕ ಸಕಾಲ ಸೇವೆಗಳ ಕಾಯಿದೆ 2011ರ ಅಡಿ 30 ದಿನಗಳ ಒಳಗೆ ಪರಿಗಣಿಸಬೇಕು ಎಂದೂ ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಖಾತೆಗೆ ಸಂಬಂಧಿಸಿದ ಸ್ವೀಕೃತಿ, ಅದರಲ್ಲಿ ಬೆಳವಣಿಗೆಗೆ ಸಂಬಂಧಿಸಿದ ಮಾಹಿತಿಯನ್ನು ವೆಬ್‌  ಹೋಸ್ಟ್‌ ಮಾಡುವ ವ್ಯವಸ್ಥೆಗೆ ಜಾರಿಗೆ ರಾಜ್ಯ ಸರ್ಕಾರವು ಸೆಪ್ಟೆಂಬರ್‌ 26ರಂದು ಒಂದು ತಿಂಗಳ ಕಾಲಾವಕಾಶ ಕೋರಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶ ಅನುಪಾಲನೆಗಾಗಿ ವಿಚಾರಣೆಯನ್ನು ಅಕ್ಟೋಬರ್‌ 30ಕ್ಕೆ ಪಟ್ಟಿ ಮಾಡಲಾಗಿದೆ.