ಲೋಕಸಭಾ ಚುನಾವಣೆಯಲ್ಲಿ ಮತದಾನಕ್ಕೆ ಬಳಕೆ ಮಾಡಿರುವ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಇಟ್ಟಿರುವ ಭದ್ರತಾ ಕೊಠಡಿಗಳಲ್ಲಿ ಹೆಚ್ಚುವರಿ ಸಿಸಿಟಿವಿ ಅಳವಡಿಸುವಂತೆ ಜಿಲ್ಲಾ ಚುನಾವಣಾಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು ತಮಿಳುನಾಡಿನ ಮುಖ್ಯ ಚುನಾವಣಾಧಿಕಾರಿ (ಸಿಇಒ) ಮದ್ರಾಸ್ ಹೈಕೋರ್ಟ್‌ಗೆ ತಿಳಿಸಿದ್ದಾರೆ.
ಹೊಸ ಸಿಸಿಟಿವಿ ಕ್ಯಾಮೆರಾಗಳಿಗೆ ನಿಗದಿತ ಲೈನ್, ರೌಟರ್ ಮತ್ತು ಹೆಚ್ಚುವರಿ ವಿದ್ಯುತ್ ಸೌಕರ್ಯ ಕಲ್ಪಿಸಲಾಗಿದ್ದು, ಅವುಗಳು ಸ್ಥಗಿತಗೊಳ್ಳದಂತೆ ಎಚ್ಚರವಹಿಸಲಾಗಿದೆ ಎಂದು ನ್ಯಾಯಮೂರ್ತಿಗಳಾದ ಎ ಡಿ ಜಗದೀಶ್ ಚಂದಿರಾ ಮತ್ತು ಆರ್ ಕಲಾಮತಿ ಅವರ ರಜಾಕಾಲೀನ ಪೀಠಕ್ಕೆ ಚುನಾವಣಾ ಆಯೋಗದ ಪರ ವಕೀಲರು ತಿಳಿಸಿದ್ದಾರೆ.
“ಇತರೆ ಸಿಸಿಟಿವಿಗಳು ತಾಂತ್ರಿಕ ಅಥವಾ ಇನ್ನಾವುದೇ ಸಮಸ್ಯೆಯಿಂದ ಸ್ಥಗಿತವಾದರೂ ಹೆಚ್ಚುವರಿ ಸಿಸಿಟಿವಿ ಕ್ಯಾಮೆರಾಗಳು ಕರ್ತವ್ಯ ನಿರ್ವಹಿಸಲಿವೆ” ಎಂದು ಆಯೋಗ ತಿಳಿಸಿದೆ.
ತಮಿಳುನಾಡಿನ ಈರೋಡ್, ನೀಲಗಿರೀಸ್ ಮತ್ತು ತೆಂಕಾಶಿಯ ಲೋಕಸಭಾ ಕ್ಷೇತ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ಕರ್ತವ್ಯ ನಿರ್ವಹಿಸುತ್ತಿಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ ಹೆಚ್ಚುವರಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಮೇ 2ರಂದು ಸೂಚನೆ ನೀಡಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸಲ್ಲಿಸಿರುವ ವರದಿಯಲ್ಲಿ ವಿವರಿಸಲಾಗಿದೆ.
ಸಿಸಿಟಿವಿ ಕ್ಯಾಮೆರಾಗಳು ಕರ್ತವ್ಯ ನಿರ್ವಹಿಸಲು ವಿಫಲವಾಗಿವೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ದೇಶಿಯಾ ಮಕ್ಕಳ ಶಕ್ತಿ ಕಚ್ಚಿಯ ಪರವಾಗಿ ವಕೀಲ ಎಂ ಎಲ್ ರವಿ ಅವರು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖಾ ಸಂಸ್ಥೆ ರಚಿಸಬೇಕು ಎಂದು ಮನವಿ ಮಾಡಿದ್ದರು. ಬುಧವಾರ ಅರ್ಜಿ ವಿಚಾರಣೆ ನಡೆಸಿದ ಪೀಠವು ಎಲ್ಲಾ ವಾದಗಳನ್ನು ದಾಖಲಿಸಿಕೊಂಡು ಅರ್ಜಿ ಇತ್ಯರ್ಥಪಡಿಸಿದೆ.