ಮನೆ ರಾಜ್ಯ ಶಿಕ್ಷಣ ಸಚಿವರನ್ನು ವಜಾಗೊಳಿಸುವಂತೆ ಸಿಎಂಗೆ ಸೂಚಿಸಿ: ಪ್ರಧಾನಿ ಮೋದಿಗೆ ರುಪ್ಸ ಪತ್ರ

ಶಿಕ್ಷಣ ಸಚಿವರನ್ನು ವಜಾಗೊಳಿಸುವಂತೆ ಸಿಎಂಗೆ ಸೂಚಿಸಿ: ಪ್ರಧಾನಿ ಮೋದಿಗೆ ರುಪ್ಸ ಪತ್ರ

0

ಬೆಂಗಳೂರು (Bengaluru): ಶಿಕ್ಷಣ ಸಚಿವರನ್ನು ವಜಾ ಮಾಡುವಂತೆ ಮುಖ್ಯಮಂತ್ರಿಗೆ ನಿರ್ದೇಶನ ನೀಡಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿಗೆ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಸಂಘ (ರುಪ್ಸ) ಪತ್ರ ಬರೆದಿದೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ತಪ್ಪು ನಿರ್ಧಾರಗಳು ಮತ್ತು ನಡವಳಿಕೆ ರಾಜ್ಯದ ಶೈಕ್ಷಣಿಕ ಪ್ರಗತಿಗೆ ಮಾರಕವಾಗಿದೆ. ಕನಿಷ್ಠ ಜ್ಞಾನವಿಲ್ಲದ, ವ್ಯಾಪಾರಿ ಮನೋಭಾವದ ಸಚಿವರಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ತಪ್ಪು ನಿರ್ಧಾರಗಳಿಂದ ಮಕ್ಕಳ ಭವಿಷ್ಯವನ್ನು ಬಲಿ ಕೊಡುವುದು ಸರ್ಕಾರಕ್ಕೆ ಶೋಭೆ ತರುವಂಥದ್ದಲ್ಲ. ಇದಕ್ಕೆ ಕಾರಣರಾದ ಶಿಕ್ಷಣ ಸಚಿವರನ್ನು ವಜಾ ಮಾಡುವಂತೆ ಮುಖ್ಯಮಂತ್ರಿಗೆ ನಿರ್ದೇಶನ ನೀಡಬೇಕು ಎಂದು ಪತ್ರದಲ್ಲಿ ಸಂಘದ ಅಧ್ಯಕ್ಷ ಲೋಕೇಶ್‌ ತಾಳಿಕಟ್ಟೆ ಆಗ್ರಹಿಸಿದ್ದಾರೆ.

ಕೋವಿಡ್‌ನಿಂದ ನಷ್ಟವಾದ ಕಲಿಕೆಯನ್ನು ಮತ್ತೆ ತುಂಬಿಸುವ ಕಡೆಗೆ ಗಮನಕೊಡುವುದು ಬಿಟ್ಟು, ಪಠ್ಯ ಪರಿಷ್ಕರಣೆಯಂಥ ಗೊಂದಲಕ್ಕೆ ಸಚಿವರು ಕಾರಣರಾಗಿದ್ದಾರೆ. ಶೈಕ್ಷಣಿಕ ದಾಖಲಾತಿ ಯೋಜನೆ ರೂಪಿಸದ ಕಾರಣ ಸುಮಾರು 10 ಲಕ್ಷ ಮಕ್ಕಳು ಶಾಲೆ ಬಿಟ್ಟು ಬೀದಿಪಾಲಾಗಿದ್ದಾರೆ. ಹಿಜಾಬ್‌ ವಿವಾದದಿಂದಾಗಿ ಮಕ್ಕಳಲ್ಲಿ ಸಾಮರಸ್ಯ, ಸಮಬಾಳ್ವೆ, ಕೂಡಿ ಕಲಿಯುವಿಕೆಗೆ ಅಡ್ಡಿ ಆಗಿದೆ ಎಂದೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪ್ರತಿವರ್ಷ ಶಾಲೆಗಳ ಮಾನ್ಯತೆ ನವೀಕರಣ, ಶಾಲಾ ಕಟ್ಟಡಗಳ ದಕ್ಷತೆ ಮತ್ತು ಅಗ್ನಿ ಅವಘಡ ಸುರಕ್ಷತೆ ಪ್ರಮಾಣಪತ್ರ ಸಲ್ಲಿಸಬೇಕೆಂಬ ನಿಯಮದಿಂದ ಬಜೆಟ್ ಶಾಲೆಗಳು ಸಂಕಷ್ಟ ಅನುಭವಿಸುತ್ತಿವೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಯಾವುದೇ ಪೂರ್ವ ತಯಾರಿ ಆಗಿಲ್ಲ. ಶಾಲೆ ಆರಂಭವಾಗಿ ಎರಡು ತಿಂಗಳಾದರೂ ಸಮವಸ್ತ್ರ, ಸೈಕಲ್‌, ಪಠ್ಯ ಪುಸ್ತಕ ನೀಡದೆ, ಸಚಿವರು ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ ಎಂದೂ ಪತ್ರದಲ್ಲಿ ಅವರು ದೂರಿದ್ದಾರೆ.