ರೋಮ್ : ಪ್ಯಾಲೆಸ್ಟೈನ್ ಪ್ರತ್ಯೇಕ ದೇಶವಾಗಬೇಕು ಎಂಬ ಬೇಡಿಕೆಗೆ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಬೆಂಬಲ ನೀಡಲು ನಿರಾಕರಿಸಿದ್ದಾರೆ. ಇದನ್ನು ವಿರೋಧಿಸಿ ಪ್ಯಾಲೆಸ್ಟೈನ್ ಪರ ಇಟಲಿಯ ಜನ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ.
ಗಾಜಾದಲ್ಲಿ ಇಸ್ರೇಲ್ ದಾಳಿಯನ್ನು ಖಂಡಿಸದ ಮತ್ತು ಪ್ಯಾಲೆಸ್ಟೈನ್ ಪ್ರತ್ಯೇಕ ದೇಶಕ್ಕೆ ಬೆಂಬಲಿಸದ ಜಾರ್ಜಿಯಾ ಮೆಲೋನಿ ನೇತೃತ್ವದ ಬಲಪಂಥೀಯ ಸರ್ಕಾರದ ವಿರುದ್ಧ ಕಾರ್ಮಿಕ ಒಕ್ಕೂಟಗಳು ಪ್ರತಿಭಟನೆಗೆ ಕರೆ ನೀಡಿದ್ದವು. ಇದರ ಭಾಗವಾಗಿ ಜನ ಇಟಲಿಯ ಹಲವು ಬೀದಿಗಳಲ್ಲಿ ಕಪ್ಪು ಬಟ್ಟೆ ಧರಿಸಿ ಪ್ಯಾಲೆಸ್ಟೀನಿಯನ್ ಧ್ವಜ ಹಿಡಿದು ಪ್ರತಿಭಟನಾ ಮೆರವಣಿಗೆಗಳು ನಡೆಯುತ್ತಿದ್ದಾರೆ.
ಸಾವಿರಾರು ಪ್ರತಿಭಟನಾಕಾರರು ರಸ್ತೆಗಳನ್ನು ತಡೆದು, ಜಿನೋವಾ ಬಂದರಿನ ಮೇಲೆ ದಾಳಿ ಮಾಡಿ ಬೆಂಕಿಹಚ್ಚಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಅಲ್ಲದೇ ವೆನ್ನಿಸ್ ಬಂದರನ್ನೂ ಸಹ ಪ್ರತಿಭಟನಾಕಾರರು ಸುತ್ತುವರೆದು ಆಕ್ರೋಶ ಹೊರಹಾಕಿದ್ದಾರೆ.
ಪ್ರತಿಭಟನಾಕಾರರ ಉಗ್ರ ಸ್ವರೂಪಕ್ಕೆ ಹಲವೆಡೆ ಸಾರ್ವಜನಿಕ ಆಸ್ತಿಪಾಸ್ತಿಗಳು ಹಾನಿಗೊಳಗಾಗಿವೆ. ಹಲವೆಡೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಘರ್ಷಣೆ ನಡೆದಿದೆ. ಈ ಘರ್ಷಣೆಯಲ್ಲಿ ಸುಮಾರು 60 ಮಂದಿ ಪೊಲೀಸರು ಗಾಯಗೊಂಡಿದ್ದಾರೆ.
ಪ್ರತಿಭಟನಾಕಾರರ ಗುಂಪು ಮಿಲನ್‌ನ ಕೇಂದ್ರ ರೈಲ್ವೇ ನಿಲ್ದಾಣದಲ್ಲಿ ಕಿಟಕಿಯನ್ನು ಒಡೆದು, ಪೊಲೀಸರ ಮೇಲೆ ಕುರ್ಚಿಯನ್ನು ಎಸೆದಿದೆ. ಈ ಘರ್ಷಣೆಯಲ್ಲಿ 60ಕ್ಕೂ ಹೆಚ್ಚು ಪೊಲೀಸರಿಗೆ ಗಾಯಗಳಾಗಿವೆ. ಬಳಿಕ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಬಳಸಿದ್ದಾರೆ. ಅಲ್ಲದೇ 10ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಇಟಲಿಯ ಬಂದರುಗಳ ಮೂಲಕ ಇಸ್ರೇಲ್‌ಗೆ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿರುವುದನ್ನು ಪ್ರತಿಭಟನಾಕಾರರು ಖಂಡಿಸಿದ್ದಾರೆ. ಈ ವೇಳೆ ಪ್ರತಿಭಟನಾಕಾರರನ್ನು ಹತ್ತಿಕ್ಕಲು ಪೊಲೀಸರು ಜಲ ಫಿರಂಗಿ ಬಳಸಿದ್ದಾರೆ. ಇನ್ನೂ ಪ್ರತಿಭಟನಾಕಾರರು ವೆನಿಸ್ ಬಂದರಿನ ಮೇಲೆ ದಾಳಿ ನಡೆಸಿರುವುದಕ್ಕೆ ಪ್ರಧಾನಿ ಜಾರ್ಜಿಯಾ ಮೆಲೋನಿ ಅಸಮಾಧಾನ ಹೊರಹಾಕಿದ್ದಾರೆ. ಹಿಂಸಾಚಾರ ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದ್ದಾರೆ.
ಬೊಲೊಗ್ನಾದಲ್ಲಿ, ಪ್ರತಿಭಟನಾಕಾರರು ಹೆದ್ದಾರಿಯನ್ನು ತಡೆದು, ವಾಹನಗಳನ್ನು ನಿಲ್ಲಿಸಿ, ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದಾರೆ. ರೋಮ್‌ನಲ್ಲಿ, ಪ್ರಮುಖ ರಸ್ತೆಗಳನ್ನು ತಡೆದಿದು ಫ್ರೀ ಪ್ಯಾಲೆಸ್ಟೈನ್ ಘೋಷಣೆ ಕೂಗಿದ್ದಾರೆ. ಪ್ರತಿಭಟನೆಯ ತೀವ್ರತೆಯಿಂದ ರಸ್ತೆ ಸಾರಿಗೆಗೆ ಸಮಸ್ಯೆಯಾಗಿದೆ. ಅಲ್ಲದೇ ಮೆಟ್ರೋ ಸಂಚಾರ ಸಹ ನಿಲ್ಲಿಸಲಾಗಿದೆ ಎಂದು ವರದಿಯಾಗಿದೆ.














