ಚಿತ್ರದುರ್ಗ: ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣ ಕುರಿತು ನ್ಯಾಯಮೂರ್ತಿ ಡಾ.ಹೆಚ್.ಎನ್.ನಾಗಮೋಹನದಾಸ್ ಅವರ ಏಕ ಸದಸ್ಯ ವಿಚಾರಣಾ ಆಯೋಗವನ್ನು ಸರ್ಕಾರ ರಚಿಸಿದ್ದು, ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣ ಸಂಬಂಧದ ವಿವಿಧ ಅಂಶಗಳ ಬಗ್ಗೆ ದತ್ತಾಂಶ ಸಂಗ್ರಹಣೆಗಾಗಿ ಸಮೀಕ್ಷೆ ಕಾರ್ಯಕ್ಕೆ ಸೋಮವಾರ ಚಿತ್ರದುರ್ಗದ ಗಾಂಧಿನಗರದಲ್ಲಿ ವಿದ್ಯುಕ್ತವಾಗಿ ಚಾಲನೆ ದೊರೆಯಿತು.
ನಗರದ ಐಯುಡಿಪಿ ಬಡಾವಣೆ ಸಮೀಪದ ಗಾಂಧಿ ನಗರದಲ್ಲಿ ಸೋಮವಾರ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-2025ಕ್ಕೆ ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ. ಸೋಮಶೇಖರ್ ಅವರು ಮಾಜಿ ಸಚಿವ ಹೆಚ್. ಆಂಜನೇಯ ಹಾಗೂ ವಿವಿಧ ಮುಖಂಡರುಗಳ ಉಪಸ್ಥಿತಿಯಲ್ಲಿ ಚಾಲನೆ ನೀಡಿದರು.
ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಕುರಿತಂತೆ ಮಾಹಿತಿ ನೀಡಿದ ಜಿಲ್ಲಾಧಿಕಾರಿಗಳು, ಸಮಾನತೆ ಮತ್ತು ಸಾಮಾಜಿಕ ನ್ಯಾಯ ಎಲ್ಲಾ ವರ್ಗದವರಿಗೆ ಎಲ್ಲಾ ಕಾಲದಲ್ಲಿಯೂ ನೀಡುವುದು ಸರ್ಕಾರದ ಅತಿ ದೊಡ್ಡ ಆಕಾಂಕ್ಷೆಯಾಗಿದೆ. ಈ ಸಮಾನತೆಯ ಪರಿಕಲ್ಪನೆ ಅನೇಕ ಶ್ರೇಷ್ಠ ಚಿಂತನಶೀಲರು ಮತ್ತು ದಾರ್ಶನಿಕರಿಂದ ಸ್ಪೂರ್ತಿ ಪಡೆದಿದೆ. ಇವರಿಂದ ಪ್ರತಿಪಾದಿಸಲ್ಪಟ್ಟ ಸಮಾನತೆಯ ತತ್ವವೆಂದರೆ ಎಲ್ಲಾ ನಾಗರೀಕರಿಗೆ ಸಮಾನ ಸ್ಥಾನಮಾನ ಹಾಗೂ ಅವಕಾಶ ನೀಡುವುದಾಗಿದೆ.
ಭಾರತದ ಸಂವಿಧಾನದ 15ನೇ ಪರಿಚ್ಛೇದವು ಮತ್ತು ಕುಲ, ಜಾತಿ, ಲಿಂಗ ಮತ್ತು ಜನ್ಮ ಸ್ಥಳಗಳ ಆಧಾರದ ಮೇಲೆ ಯಾವುದೇ ತಾರತಮ್ಯ ಮಾಡುವುದನ್ನು ನಿಷೇಧಿಸುತ್ತದೆ. ಅದೇ ರೀತಿ ಪರಿಚ್ಛೇದ 16ರಲ್ಲಿ ಎಲ್ಲರಿಗೂ ಸಾರ್ವತ್ರಿಕ ಉದ್ಯೋಗ ವಲಯದಲ್ಲಿ ಸರಿಸಮಾನ ಅವಕಾಶಗಳ ಒದಗಿಸಲು ಅನುವು ಮಾಡಿಕೊಡಲಾಗಿದೆ. ವಿಭಿನ್ನ ಸ್ಥಳಗಳಲ್ಲಿ ವಾಸವಾಗಿರುವ ಅಥವಾ ವಿಭಿನ್ನ ವೃತ್ತಿಗಳಲ್ಲಿ ತೊಡಗಿರುವ ವ್ಯಕ್ತಿಗಳು ಹಾಗೂ ಜನ ಸಮೂಹಗಳಿಗೆ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯನ್ನು ಕಡಿಮೆ ಮಾಡಲು ಮತ್ತು ಸ್ಥಾನಮಾನ ಸೌಲಭ್ಯ ಹಾಗೂ ಅವಕಾಶಗಳಲ್ಲಿ ತಾರತಮ್ಯವನ್ನು ತೊಡೆದು ಹಾಕಲು ಕಾರ್ಯಕ್ರಮ ರೂಪಿಸುವುದಕ್ಕಾಗಿ ಸಾಮಾಜಿಕ ಸ್ಥಿತಿಗತಿಗಳ ಅಧ್ಯಯನ ಮಾಡಬೇಕಾಗಿರುತ್ತದೆ.
ಈ ನಿಟ್ಟಿನಲ್ಲಿ ಸರ್ವೋಚ್ಛ ನ್ಯಾಯಾಲಯವು ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ನೀಡಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ಇದೆ ಎಂದು ತೀರ್ಪು ನೀಡಿರುತ್ತದೆ. ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಇರುವ ಜಾತಿಗಳನ್ನು ಉಪ ವರ್ಗೀಕರಣ ಮಾಡಿ ಒಳ ಮೀಸಲಾತಿಯನ್ನು ನೀಡಬಹುದು ಎಂದು 2024ರ ಆಗಸ್ಟ್ 01ರಂದು ತೀರ್ಪು ನೀಡಿದೆ. ಕರ್ನಾಟಕ ಸರ್ಕಾರವು ಒಳಮೀಸಲಾತಿಯನ್ನು ಜಾರಿಮಾಡಲು ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಏಕ ವ್ಯಕ್ತಿ ವಿಚಾರಣಾ ಆಯೋಗವನ್ನು ನೇಮಿಸಿ ಒಳ ಮೀಸಲಾತಿಯನ್ನು ವರ್ಗೀಕರಿಸಲು ಸೂಚಿಸಿರುವ ಹಿನ್ನೆಲೆಯಲ್ಲಿ ಉಪ ವರ್ಗೀಕರಣ ಕೈಗೊಳ್ಳಲು ಅವಶ್ಯವಿರುವ ದತ್ತಾಂಶಗಳನ್ನು ಸಂಗ್ರಹಿಸಲು ಸಮೀಕ್ಷೆಯನ್ನು ಕೈಗೊಳ್ಳಲು ಉದ್ದೇಶಿಸಿರುತ್ತದೆ ಎಂದು ಮಾಹಿತಿ ನೀಡಿದರು.
ಮಾಜಿ ಸಚಿವ ಹೆಚ್.ಆಂಜನೇಯ ಮಾತನಾಡಿ, ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರಿರುವ ಜನರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ, ಔದ್ಯೋಗಿಕ ಪ್ರಾತಿನಿಧ್ಯತೆ ಇತ್ಯಾದಿ ಸ್ಥಿತಿಗತಿಗಳ ಬಗ್ಗೆ ಸಮೀಕ್ಷೆ ಮಾಡುವುದು ನ್ಯಾಯಮೂರ್ತಿ ಡಾ.ಹೆಚ್.ಎಸ್.ನಾಗಮೋಹನ್‍ದಾಸ್ ಏಕ ಸದಸ್ಯ ವಿಚಾರಣಾ ಆಯೋಗದ ಉದ್ದೇಶವಾಗಿದ್ದು, ಪರಿಶಿಷ್ಟ ಜಾತಿಗಳ ಸ್ಥಿತಿಗತಿಗಳ ಬಗ್ಗೆ ವೈಜ್ಞಾನಿಕವಾಗಿ ಮತ್ತು ವಾಸ್ತವಿಕ ಮಾಹಿತಿ ಪಡೆದುಕೊಂಡು ಒಳ ಮೀಸಲಾತಿಯನ್ನು ವರ್ಗೀಕರಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿರುತ್ತದೆ.
ಸಮೀಕ್ಷೆಯಿಂದ ಹೊರಹೊಮ್ಮಿದ ಅಂಶಗಳ ಆಧಾರದಲ್ಲಿ ಅಂತಹ ಸಮುದಾಯಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಾನಮಾನವನ್ನು ಅಧ್ಯಯನ ಮಾಡಿ ಒಳ ಮೀಸಲಾತಿ ವರ್ಗೀಕರಣವನ್ನು ಮಾಡುವುದಕ್ಕಾಗಿ ಎಲ್ಲಾ ಪರಿಶಿಷ್ಟ ಜಾತಿಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯ ಕುರಿತು ಮನೆ-ಮನೆಗೆ ಭೇಟಿ ನೀಡಿ ಸಮೀಕ್ಷೆಯನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ. ಒಳ ಮೀಸಲಾತಿ ಜಾರಿ ಸಂಬಂಧ ಮನೆ ಮನೆಗೆ ಭೇಟಿ ನೀಡುವ ಗಣತಿದಾರರಿಗೆ ಸೂಕ್ತ ರೀತಿಯಲ್ಲಿ ಮಾಹಿತಿ ನೀಡಿ, ಅಗತ್ಯ ಸಹಕಾರ ನೀಡುವ ಮೂಲಕ ಸಮೀಕ್ಷಾ ಕಾರ್ಯ ಯಶಸ್ವಿಗೊಳಿಸಿ, ಒಳ ಮೀಸಲಾತಿಯ ಹಂಚಿಕೆಗೆ ಸಹಕರಿಸಬೇಕು ಎಂದು ಪರಿಶಿಷ್ಟ ಜಾತಿಯ ಎಲ್ಲ ಸಮುದಾಯದವರಿಗೆ ಮನವಿ ಮಾಡಿದರು.














