ಮೈಸೂರು (Mysuru)-ಪ್ರಧಾನಿ ನರೇಂದ್ರ ಮೋದಿ ಅವರು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜೂ. 21ರಂದು ನಡೆಯುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಪೂರ್ವಭಾವಿಯಾಗಿ ಭಾನುವಾರ ಯೋಗ ನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿ ಯೋಗಾಸನ ಅಭ್ಯಾಸ ನಡೆಸಲಾಯಿತು.
ಇದೇ ಸಂದರ್ಭದಲ್ಲಿ ನಗರದ ರೇಸ್‌ಕೋರ್ಸ್ ಮೈದಾನದಲ್ಲಿ ನಡೆಯುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪೋಸ್ಟರ್ ಹಾಗೂ ಬ್ಯಾನರ್‌ಗಳನ್ನು ಬಿಡುಗಡೆಗೊಳಿಸಲಾಯಿತು.
ಮೈಸೂರು ಯೋಗ ಫೆಡರೇಷನ್ ವತಿಯಿಂದ ನಡೆದ ಪೂರ್ವಭಾವಿ ಅಭ್ಯಾಸದಲ್ಲಿ ಎಸ್‌ಪಿವೈಎಸ್‌ಎಸ್‌ನ ಶ್ರೀನಿವಾಸ ನಾಯ್ಡು ಅವರು ಯೋಗ ಪೂರ್ವ ವ್ಯಾಯಾಮ, ವೈಎಸ್‌ಎಫ್‌ನ ಡಾ. ಪಿ.ಎನ್. ಗಣೇಶ್‌ಕುಮಾರ್ ಅವರು ಆಸನ, ಯೋಗ ಒಕ್ಕೂಟದ ದೇವರಾಜು ಅವರು ಪ್ರಾಣಾಯಾಮ, ಜಿಎಸ್‌ಎಸ್ ಯೋಗಿಕ್ ರಿಸರ್ಚ್‌ನ ಪವನ್ ಕೃಷ್ಣ ಅವರು ಧ್ಯಾನ, ಮೈಸೂರು ಯೋಗ ಒಕ್ಕೂಟದ ಡಾ. ಬಿ.ಪಿ. ಮೂರ್ತಿ ಅವರು ಸಂಕಲ್ಪವನ್ನು ಯೋಗಪಟುಗಳಿಗೆ ಅಭ್ಯಸಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಕಳೆದೆರಡು ಬಾರಿ ಮೈಸೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗಿಯಾಗಲು ಸಾಧ್ಯವಾಗಿರಲಿಲ್ಲ. ಈ ಬಾರಿ ಮೋದಿ ಅವರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ನಗರದ ಎಲ್ಲಾ ಯೋಗ ತರಬೇತಿ ಕೇಂದ್ರದವರು, ಖಾಸಗಿ ಕಚೇರಿಯವರು, ಶಾಲಾ ಹಾಗೂ ಕಾಲೇಜಿನವರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ವಿಶ್ವದಾಖಲೆಗೆ ಮುನ್ನಡಿ ಬರೆಯಬೇಕೆಂದು ವೈಎಫ್‌ಎಂನ ಮುಖ್ಯಸ್ಥರು ಕರೆ ನೀಡಿದರು. ಜೊತೆಗೆ ಎಲ್ಲ ಪಕ್ಷಗಳ ಮುಖಂಡರು ಸಹಕರಿಸುವಂತೆ ಮನವಿ ಮಾಡಿದರು.
ಜನಸಾಮಾನ್ಯರಿಗೆ ಅಂತಾರಾಷ್ಟ್ರೀಯ ಯೋಗ ದಿನದ ಅರಿವು ಮೂಡಿಸಿ, ಯೋಗ ತರಬೇತಿ ನೀಡುವ ನಿಟ್ಟಿನಲ್ಲಿ ಯೋಗ ತರಬೇತುದಾರರನ್ನು ಸಜ್ಜುಗೊಳಿಸಲಾಗುತ್ತಿದ್ದು, ಆಸಕ್ತರಿಗೆ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.