ಟೆಹರಾನ್ : ಇರಾನ್ ಸರ್ಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಈಗ 12 ದಿನಕ್ಕೆ ಕಾಲಿಟ್ಟಿದ್ದು ಇಂಟರ್‌ನೆಟ್ ಸೇವೆಯನ್ನು ಬಂದ್ ಮಾಡಲಾಗಿದೆ. ಇರಾನ್‌ನಿಂದ ಗಡಿಪಾರು ಆಗಿರುವ ಯುವರಾಜ ರೇಜಾ ಪಹ್ಲವಿ ಅವರು ಗುರುವಾರ ನಂತರ ಸಾಮೂಹಿಕ ಪ್ರತಿಭಟನೆಗೆ ಕರೆ ನೀಡಿದ ಬೆನ್ನಲ್ಲೇ ತಡರಾತ್ರಿ ಟೆಹರಾನ್ ಮತ್ತು ಇತರ ನಗರಗಳಲ್ಲಿ ಸಾವಿರಾರು ಜನರು ಬೀದಿಗಿಳಿದು ಖಮೇನಿ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.
ಮುಲ್ಲಾಗಳೇ ದೇಶಬಿಟ್ಟು ತೊಲಗಿ ಎಂದು ಜನರು ಘೋಷಣೆ ಕೂಗಿ ಟೆಹರಾನ್‌ನಲ್ಲಿರುವ ಸರ್ಕಾರಿ ಕಚೇರಿಗೆ ಬೆಂಕಿ ಹಾಕಿ ಆಕ್ರೋಶ ಹೊರಹಾಕಿದ್ದಾರೆ. ಇಸ್ಲಾಮಿಕ್ ಗಣರಾಜ್ಯದ 47 ವರ್ಷಗಳ ಇತಿಹಾಸದಲ್ಲಿ ಅತಿ ದೊಡ್ಡ ಆಡಳಿತ ವಿರೋಧಿ ಪ್ರತಿಭಟನೆ ಇದಾಗಿದೆ.
ಇರಾನ್ ಸರ್ವೋಚ್ಚ ನಾಯಕ ಖಮೇನಿಯವರ ತವರು ಮತ್ತು ಅವರ ಆಂತರಿಕ ವಲಯದಿಂದ ಬಿಗಿಯಾಗಿ ನಿಯಂತ್ರಿಸಲ್ಪಡುವ ನಗರವಾದ ಮಷಾದ್‌ನಲ್ಲಿ ಭಾರೀ ಪ್ರತಿಭಟನೆ ನಡೆದಿದೆ. ಪ್ರಮುಖ ನಗರಗಳಲ್ಲಿ ವ್ಯಾಪಾರಿಗಳು ಅಂಗಡಿಗಳನ್ನು ಮುಚ್ಚುವ ಮೂಲಕ ಪ್ರತಿಭಟನೆಗೆ ಸಾಥ್ ನೀಡಿದ್ದಾರೆ.
ಭದ್ರತಾ ಪಡೆಗಳ ಗುಂಡಿನ ದಾಳಿಯಿಂದ ಮಾನವ ಹಕ್ಕುಗಳ ಗುಂಪುಗಳು 8 ಮಕ್ಕಳು ಸೇರಿದಂತೆ ಕನಿಷ್ಠ 45 ಪ್ರತಿಭಟನಾಕಾರರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ ಎಂದು ವರದಿ ಮಾಡಿದೆ. ಬೆಲೆ ಏರಿಕೆ, ಉದ್ಯೋಗಗಳು ಮತ್ತು ಜೀವನ ವೆಚ್ಚಗಳ ಏರಿಕೆ, ಅತಿಯಾದ ಧಾರ್ಮಿಕತೆನ್ನು ಖಂಡಿಸಿ ಇರಾನ್ ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.















