ಮನೆ ಕ್ರೀಡೆ ಐಪಿಎಲ್‌: ಗುಜರಾತ್‌ ಗೆ ರೋಚಕ ಜಯ; ಅಂಕಪಟ್ಟಿಯಲ್ಲಿ ಅಗ್ರಸ್ಥಾನ

ಐಪಿಎಲ್‌: ಗುಜರಾತ್‌ ಗೆ ರೋಚಕ ಜಯ; ಅಂಕಪಟ್ಟಿಯಲ್ಲಿ ಅಗ್ರಸ್ಥಾನ

0

ಮುಂಬೈ (Mumbai)- ಐಪಿಎಲ್‌ (IPL) ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ (Gujarat Titans) ತಂಡ ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ವಿರುದ್ಧ ಐದು ವಿಕೆಟ್ ಅಂತರದ ರೋಚಕ ಗೆಲುವು ಸಾಧಿಸಿದೆ.

ವೃದ್ಧಿಮಾನ್ ಸಹಾ (68) ಹಾಗೂ ಕೊನೆಯ ಹಂತದಲ್ಲಿ ರಾಹುಲ್ ತೆವಾಟಿಯಾ (40*) ಹಾಗೂ ರಶೀದ್ ಖಾನ್ (31*) ಅಬ್ಬರದ ನೆರವಿನಿಂದ ಗುಜರಾತ್‌ ಗೆಲುವಿನ ನಗೆ ಬೀರಿದೆ. ಇದರೊಂದಿಗೆ ಯುವ ವೇಗಿ ಉಮ್ರಾನ್ ಮಲಿಕ್ ಚೊಚ್ಚಲ 5 ವಿಕೆಟ್ ಸಾಧನೆಯು ವ್ಯರ್ಥವೆನಿಸಿದೆ.

ಇದರೊಂದಿಗೆ ಇದೇ ಮೊದಲ ಬಾರಿಗೆ ಐಪಿಎಲ್‌ಗೆ ಪದಾರ್ಪಣೆ ಮಾಡಿರುವ ಗುಜರಾತ್, ಎಂಟು ಪಂದ್ಯಗಳಲ್ಲಿ ಏಳನೇ ಗೆಲುವಿನೊಂದಿಗೆ ಒಟ್ಟು 14 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಅತ್ತ ಹೈದರಾಬಾದ್ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದ್ದು, ಎಂಟು ಪಂದ್ಯಗಳಲ್ಲಿ ಮೂರನೇ ಸೋಲು ಅನುಭವಿಸಿದೆ. ಆದರೂ 10 ಅಂಕಗಳೊಂದಿಗೆ ಮೂರನೇ ಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಮೊದಲು ಬ್ಯಾಟಿಂಗ್ ನಡೆಸಿದ ಹೈದರಾಬಾದ್ ಅಭಿಷೇಕ್ ಶರ್ಮಾ (65) ಹಾಗೂ ಏಡನ್ ಮಾರ್ಕರಮ್ ಆಕರ್ಷಕ ಅರ್ಧಶತಕಗಳ (56) ನೆರವಿನಿಂದ 6 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿತ್ತು. ಬಳಿಕ ಗುರಿ ಬೆನ್ನಟ್ಟಿದ ಗುಜರಾತ್ ಒಂದು ಹಂತದಲ್ಲಿ 16 ಓವರ್‌ಗಳಲ್ಲಿ 140 ರನ್ನಿಗೆ 5 ವಿಕೆಟ್ ಕಳೆದುಕೊಂಡು ಸೋಲಿನ ಭೀತಿಗೊಳಗಾಗಿತ್ತು. ಆದರೆ ಮುರಿಯದ ಆರನೇ ವಿಕೆಟ್‌ಗೆ 24 ಎಸೆತಗಳಲ್ಲಿ 59 ರನ್‌ಗಳ ಜೊತೆಯಾಟ ಕಟ್ಟಿದ ತೆವಾಟಿಯಾ ಹಾಗೂ ರಶೀದ್, ಹೈದರಾಬಾದ್ ಕೈಯಿಂದ ಗೆಲುವನ್ನು ಅಕ್ಷರಶಃ ಕಸಿದುಕೊಂಡರು.

ಕೊನೆಯ ಓವರ್‌ನಲ್ಲಿ ಗುಜರಾತ್ ಗೆಲುವಿಗೆ 22 ರನ್‌ಗಳ ಅಗತ್ಯವಿತ್ತು. ಮಾರ್ಕೊ ಜಾನ್ಸೆನ್ ಎಸೆದ ಅಂತಿಮ ಓವರ್‌ನಲ್ಲಿ ತೆವಾಟಿಯಾ ಹಾಗೂ ರಶೀದ್ ಅಬ್ಬರಿಸುವ ಮೂಲಕ ಗುಜರಾತ್‌ಗೆ ರೋಚಕ ಗೆಲುವು ಒದಗಿಸಿಕೊಡುವಲ್ಲಿ ನೆರವಾದರು. ಕೊನೆಯ ಓವರ್‌ನಲ್ಲಿ ರಶೀದ್ ಮೂರು ಹಾಗೂ ತೆವಾಟಿಯಾ ಒಂದು ಸಿಕ್ಸರ್ ಬಾರಿಸುವ ಮೂಲಕ ಅಬ್ಬರಿಸಿದರು.

ಗುಜರಾತ್ ತಂಡಕ್ಕೆ ವೃದ್ಧಿಮಾನ್ ಸಹಾ ಹಾಗೂ ಶುಭಮನ್ ಗಿಲ್ ಉತ್ತಮ ಆರಂಭವೊದಗಿಸಿದರು. ಗಿಲ್ ಎಚ್ಚರಿಕೆಯ ಇನ್ನಿಂಗ್ಸ್ ಕಟ್ಟಿದರೆ ಸಹಾ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಗಮನ ಸೆಳೆದರು. ಇವರಿಬ್ಬರು ಮೊದಲ ವಿಕೆಟ್‌ಗೆ 46 ಎಸೆತಗಳಲ್ಲಿ 69 ರನ್ ಪೇರಿಸಿದರು. ಈ ಹಂತದಲ್ಲಿ ದಾಳಿಗಿಳಿದ ಸ್ಪೀಡ್ ಸ್ಟಾರ್ ಉಮ್ರಾನ್ ಮಲಿಕ್, ಡಬಲ್ ಆಘಾತ ನೀಡಿದರು. ಗಿಲ್ (22) ಜೊತೆಗೆ ನಾಯಕ ಹಾರ್ದಿಕ್ ಪಾಂಡ್ಯರನ್ನು (10) ಪೆವಿಲಿಯನ್‌ಗೆ ಅಟ್ಟಿದರು.

ಅತ್ತ ಬಿರುಸಿನ ಆಟವಾಡಿದ ಸಹಾ 28 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಅವರಿಗೆ ಡೇವಿಡ್ ಮಿಲ್ಲರ್ ಅವರಿಂದ ಉತ್ತಮ ಬೆಂಬಲ ದೊರಕಿತು. ಇನ್ನಿಂಗ್ಸ್‌ನ 14ನೇ ಓವರ್‌ನಲ್ಲಿ ಮಗದೊಮ್ಮೆ ದಾಳಿಗಿಳಿದ ಮಲಿಕ್, ಅಪಾಯಕಾರಿ ಸಹಾ ಅವರನ್ನು ಗಂಟೆಗೆ 153 ಕಿ.ಮೀ. ವೇಗದಲ್ಲಿ ಯಾರ್ಕರ್ ಎಸೆದು ಕ್ಲೀನ್ ಬೌಲ್ಡ್ ಮಾಡಿ ಮೋಡಿ ಮಾಡಿದರು. 38 ಎಸೆತಗಳನ್ನು ಎದುರಿಸಿದ ಸಹಾ 11 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 68 ರನ್ ಗಳಿಸಿದರು.

ಅಂತಿಮ ಐದು ಓವರ್‌ನಲ್ಲಿ ಗುಜರಾತ್ ಗೆಲುವಿಗೆ 61 ರನ್ ಬೇಕಾಗಿತ್ತು. ಆದರೆ ಡೇವಿಡ್ ಮಿಲ್ಲರ್ (17) ಹಾಗೂ ಅಭಿನವ್ ಮನೋಹರ್ (0) ಕ್ಲೀನ್ ಬೌಲ್ಡ್ ಮಾಡಿದ ಉಮ್ರಾನ್, ಗುಜರಾತ್ ಓಟಕ್ಕೆ ಕಡಿವಾಣ ಹಾಕಿದರು. ಈ ಮೂಲಕ 5 ವಿಕೆಟ್ ಸಾಧನೆ ಮಾಡಿದರು. ಈ ಪೈಕಿ ನಾಲ್ವರು ಆಟಗಾರರನ್ನು ಕ್ಲೀನ್ ಬೌಲ್ಡ್ ಮಾಡುವಲ್ಲಿ ಯಶಸ್ವಿಯಾದರು.

ಅಂತಿಮ ಹಂತದಲ್ಲಿ ಅಬ್ಬರಿಸಿದ ತೆವಾಟಿಯಾ ಹಾಗೂ ರಶೀದ್ ಪಂದ್ಯದ ಫಲಿತಾಂಶವನ್ನೇ ಬದಲಿಸಿದರು. ತೆವಾಟಿಯಾ 21 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 40 ರನ್ ಗಳಿಸಿ ಔಟಾಗದೆ ಉಳಿದರು. ಅತ್ತ ಕೇವಲ 11 ಎಸೆತಗಳನ್ನು ಎದುರಿಸಿದ ರಶೀದ್, ನಾಲ್ಕು ಸಿಕ್ಸರ್ ನೆರವಿನಿಂದ 31 ರನ್ ಗಳಿಸಿ ಅಜೇಯರಾಗುಳಿದರು. ಅಂತಿಮ ಎಸೆತದಲ್ಲಿ ಸಿಕ್ಸರ್ ಬಾರಿಸಿದ ರಶೀದ್ ತನ್ನ ಮಾಜಿ ತಂಡದ ವಿರುದ್ಧ ಗುಜರಾತ್‌ಗೆ ರೋಚಕ ಗೆಲುವು ಒದಗಿಸಿಕೊಡುವಲ್ಲಿ ನೆರವಾದರು.

ಅಭಿಷೇಕ್ ಶರ್ಮಾ (65) ಹಾಗೂ ಅನುಭವಿ ಏಡನ್ ಮಾರ್ಕರಮ್ ಆಕರ್ಷಕ ಅರ್ಧಶತಕಗಳ (56) ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಆರು ವಿಕೆಟ್ ನಷ್ಟಕ್ಕೆ 195 ರನ್ ಪೇರಿಸಿತ್ತು. ಗುಜರಾತ್ ಪರ ಮೊಹಮ್ಮದ್ ಶಮಿ ಮೂರು ವಿಕೆಟ್ ಕಬಳಿಸಿದರು.